ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಪ್ರಕರಣ- ಸಿಓಡಿಯಿಂದ ಚಾರ್ಜ್ಶೀಟ್ ಸಲ್ಲಿಕೆ
ಉಡುಪಿ: ಉಡುಪಿಯ ಖಾಸಗಿ ಕಾಲೇಜ್ವೊಂದರ ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪಣಾ (ಚಾರ್ಜ್ಶೀಟ್) ಪಟ್ಟಿಯನ್ನು ಸಿಓಡಿ ಪೊಲೀಸರು ಇಂದು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಿಓಡಿ ಡಿವೈಎಸ್ಪಿ ಅಂಜು ಮಾಲಾ ಇಂದು ಎರಡು ಸಂಪುಟಗಳಲ್ಲಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಧೀಶೆ ದೀಪಾ ಅವರಿಗೆ ಸಲ್ಲಿಕೆ ಮಾಡಿದರು. ಈ ಸಂದರ್ಭ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಎಚ್.ಎಂ.ನದಾಫ್ ಹಾಜರಿದ್ದರು.
2023ರ ಜು.18ರಂದು ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಶೌಚಾಲಯಕ್ಕೆ ಹೋದ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಚಿತ್ರೀಕರಣ ಮಾಡಿರುವುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿ ವಿವಾದ ಸೃಷ್ಠಿಸಿತ್ತು. ಈ ಕುರಿತು ಮಲ್ಪೆ ಪೊಲೀಸರು ವಾರದ ಬಳಿಕ ಸ್ವಯಂ ಪ್ರೇರಿತರಾಗಿ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಈ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಬಿಜೆಪಿ, ಎಬಿವಿಪಿ ಹಾಗೂ ಸಂಘಪರಿವಾರ ಪ್ರತಿಭಟನೆಗಳನ್ನು ನಡೆಸಿದ್ದವು. ಬಳಿಕ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಗೌಡ ಅವರನ್ನು ತನಿಖಾಧಿಕಾರಿ ಸ್ಥಾನದಿಂದ ಬದಲಾಯಿಸಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ನೇಮಕ ಮಾಡಲಾಗಿತ್ತು. ಆ.7ರಂದು ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಆದೇಶ ನೀಡಿತು.