ಹನುಮಾನ್ ಚಾಲೀಸಾ ಕೇಸ್: ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನ, ತೇಜಸ್ವಿ ಸೂರ್ಯ ಸೇರಿ ಹಲವರು ವಶಕ್ಕೆ
ಬೆಂಗಳೂರು: ನಗರತ್ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿಂದು ಹಿಂದೂಪರ ಸಂಘಟನೆಗಳು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಇದರಿಂದಾಗಿ ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಗೆ ಖಂಡನೆ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ಇಂದು ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿಯಿಂದ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಶಾಂತಿಯುತ ಮೆರವಣಿಗೆಯಲ್ಲಿ ಹಮ್ಮಿಕೊಂಡಿದ್ದರು.
ಇದರಂತೆ ನೂರಾರು ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ನಗರತ್ ಪೇಟೆಗೆ ಸೇರಿದ್ದರು. ಈ ಮೆರವಣಿಗೆಗೆ ಬಿಜೆಪಿ ನಾಯಕರಾದ ಸುರೇಶ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಕೂಡ ಭಾಗಿಯಾಗಿದ್ದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು.
ಇದೇ ವೇಳೆ ಪೊಲೀಸರು ಸುರೇಶ್ ಕುಮಾರ್ ಅವರನ್ನು ಎಳೆದಾಡಿದ ಘಟನೆ ನಡೆಯಿತು.
ಹಲ್ಲೆಗೊಳಗಾದ ಮುಖೇಶ್ನನ್ನು ಪೊಲೀಸರು ಜೀಪ್ನಲ್ಲಿ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಪೊಲೀಸ್ ವಾಹನದ ಮುಂದೆ ನಿಂತು ಶಾಸಕ ಸುರೇಶ್ಕುಮಾರ್ ಪ್ರತಿಭಟನೆ ನಡೆಸಿದರು. ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಶಾಸಕ ಸುರೇಶ್ಕುಮಾರ್ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ನೀತಿ ಸಂಹಿತೆ ಜಾರಿಯಾಗಿದೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದರು. ಇದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಹಿಂದೂ ಕಾರ್ಯಕರ್ತರು ಮುಖೇಶ್ನನ್ನು ಪೊಲೀಸ್ ವಾಹನದಿಂದ ಕೆಳಗೆ ಇಳಿಸಿಕೊಂಡರು.
ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪೊಲೀಸರು, ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು.