ಪಂಚಾಯತ್ ರಾಜ್: ಭಾರತ ಸರ್ಕಾರ ಸಂವಾದಕ್ಕೆ ರಾಜ್ಯದಿಂದ ಬೆಳಪು ದೇವಿಪ್ರಸಾದ್ ಶೆಟ್ಟಿ
ಉಡುಪಿ: ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಕೈಗೊಂಡಿರುವ ಯೋಜನೆಗಳು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಕೈಗೊಳ್ಳಬಹುದಾದ ಕಾರ್ಯಕ್ರಮಗಳು ಬಗ್ಗೆ ಚರ್ಚಿಸಲು ಭಾರತ ಸರ್ಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಶೇಷ ಸಾಧನೆ ಮಾಡಿರುವ ದೇಶದ ಆಯ್ದ 4 ಪಂಚಾಯತ್ ಅಧ್ಯಕ್ಷರುಗಳನ್ನು ಆಯ್ಕೆಗೊಳಿಸಿದ್ದು, ಕರ್ನಾಟಕ ರಾಜ್ಯದಿಂದ ಏಕೈಕ ಪ್ರತಿನಿಧಿಯಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಅವಕಾಶ ಕಲ್ಪಿಸಿದೆ.
ಗ್ರಾಮೀಣಾಭಿವೃದ್ಧಿಯಲ್ಲಿ ಮಾಡಿರುವ ಸಾಧನೆ ಮುಂದೆ ಮಾಡಬಹುದಾದ ಯೋಜನೆಗಳು ಬಗ್ಗೆ .ಅ22 ರಂದು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯದರ್ಶಿ ಸುನೀಲ್ ಕುಮಾರ್ ಮತ್ತು ಜಂಟಿ ಕಾರ್ಯದರ್ಶಿ ಕುಶವಂತ ಸೇಠಿಯೊಂದಿಗೆ ನೇರ ಸಂವಾದವನ್ನು ನಡೆಸಲಿರುವ.
ದೇವಿಪ್ರಸಾದ್ ಶೆಟ್ಟಿಯವರು ಕಳೆದ 3 ದಶಕಗಳಿಂದ ಗ್ರಾಮೀಣಾಭಿವೃದ್ಧಿಯಲ್ಲಿ ಸೇವೆ ಸಲ್ಲಿಸಿದ್ದು, 8 ಬಾರಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರಾಜ್ಯಕ್ಕೆ ಮಾದರಿಯಾದ ಯೋಜನೆಗಳನ್ನು ಕುಗ್ರಾಮದಲ್ಲಿ ಜಾರಿಗೆ ತಂದು, ಕರ್ನಾಟಕ ಸರ್ಕಾರ ಪಠ್ಯಪುಸ್ತಕದಲ್ಲಿ ಬೆಳಪು ಗ್ರಾಮದ ಅಭಿವೃದ್ಧಿಯ ಅಧ್ಯಾಯ ಪ್ರಕಟಿಸಿದ್ದು, ಆದಾಯದಲ್ಲಿ ಅತ್ಯಂತ ಹಿಂದುಳಿದಿದ್ದ ಪುಟ್ಟ ಕಂದಾಯ ಗ್ರಾಮವನ್ನು ನಗರಕ್ಕೆ ಹೋಲುವ ರೀತಿಯಲ್ಲಿ ಅಭಿವೃದ್ಧಿಗೊಳಿಸಿ, ನಿವೇಶನ ರಹಿತ ನೂರಾರು ಬಡವರಿಗೆ ನಿವೇಶನ, ಗ್ರಾಮಸ್ಥರಿಗೆ ಶುದ್ಧೀಕರಣ ಕುಡಿಯುವ ನೀರಿನ ಯೋಜನೆ, ದೇಶಭಕ್ತಿ ಮತ್ತು ನಾಡ ಭಕ್ತಿ ಹೆಚ್ಚಿಸುವ ವಿಶಿಷ್ಟ ಯೋಜನೆ, ಕೆ.ಜಿ ಯಿಂದ ಪಿ.ಜಿ.ಯವರೆಗಿನ ಶೈಕ್ಷಣಿಕ ಕೇಂದ್ರ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಕೈಗಾರಿಕಾ ಪಾರ್ಕ್, ಪ್ರವಾಸೋದ್ಯಮ ಉತ್ತೇಜನ, ಸ್ಥಳೀಯ ಸಂಪನ್ಮೂಲ ಅಭಿವೃದ್ಧಿ ಯೋಜನೆ, ಕಸದಿಂದ ರಸ ಯೋಜನೆ, ಅತ್ಯಾಧುನಿಕ ಆಡಳಿತ ವ್ಯವಸ್ಥೆ, ಸುಂದರ ಗ್ರಾಮ ಸೌಧ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮಾಭಿವೃದ್ಧಿ ಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ ಮಕ್ಕಳ ಗ್ರಾಮ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.
ಹಲವಾರು ಜಿಲ್ಲಾ-ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಪುರಸ್ಕಾರ ಲಭಿಸಿದ. ಶೆಟ್ಟಿಯವರಿಗೆ ಗ್ರಾಮೀಣಾಭಿವೃದ್ಧಿಯ ವಿಶೇಷ ಸಾಧನೆಗಾಗಿ ಪ್ರಪ್ರಥಮ ಬಾರಿಗೆ ಗೌರವ ಡಾಕ್ಟರೇಟ್ ಲಭಿಸಿದೆ, ದೇವಿಪ್ರಸಾದ್ ಶೆಟ್ಟಿ ಅವರ ಸಾಧನೆಗಳನ್ನು ಗುರುತಿಸಿ ಅಬ್ದುಲ್ ನಜೀರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇದರ ನಿರ್ದೇಶಕರಾದ ಪ್ರಸಾದ್‌ರವರು ಭಾರತ ಸರಕಾರಕ್ಕೆ ಶೆಟ್ಟಿಯವರ ಹೆಸರನ್ನು ಕರ್ನಾಟಕದಿಂದ ಶಿಫಾರಸು ಗೊಳಿಸಿದ್ದಾರೆ.