‘ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆ’- ಚುನಾವಣಾ ಬಾಂಡ್ ಕುರಿತು ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ: ಚುನಾವಣಾ ಬಾಂಡ್ ವಿಷಯದ ಕುರಿತು ತನ್ನ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾಂಗ್ರೆಸ್, ಸೋಮವಾರ, ಮೋದಿ ಸರಕಾರವನ್ನು ಸುಲಿಗೆಯ ಸರಕಾರ ಎಂದು ದೂಷಿಸಿದ್ದು,ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿರುವ ಒಟ್ಟು 21 ಸಂಸ್ಥೆಗಳು ಸಿಬಿಐ, ಈಡಿ ಅಥವಾ ಆದಾಯ ತೆರಿಗೆ ಇಲಾಖೆಯಿಂದ ದಾಳಿಗೊಳಗಾಗಿದ್ದವು ಎಂದು ಆರೋಪಿಸಿದೆ.
ದಿನ ಕಳೆದಂತೆ ಚುನಾವಣಾ ಬಾಂಡ್ ಹಗರಣದ ಆಳದ ಕುರಿತು ಮತ್ತಷ್ಟು ನಿದರ್ಶನಗಳು ಎದ್ದು ಬರುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
“ಇಂದು ನಾವು ‘ಪ್ರಧಾನ ಮಂತ್ರಿ ಹಫ್ತಾ ವಸೂಲಿ ಯೋಜನೆ’ಯ ಚುನಾವಣಾ ಬಾಂಡ್ ಹಗರಣದ ನಾಲ್ಕು ಧಾರೆಗಳ ಪೈಕಿ ಎರಡನೆಯ ಧಾರೆಯ ಮೇಲೆ ಬೆಳಕು ಚೆಲ್ಲುತ್ತಿದ್ದೇವೆ: 1. ಚಂದಾ ನೀಡಿ, ದಂಡ ಪಡೆಯಿರಿ. 2. ಹಫ್ತಾ ವಸೂಲಿ” ಎಂದು ಜೈರಾಮ್ ರಮೇಶ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಅರಬಿಂದೊ ಫಾರ್ಮಾದ ನಿರ್ದೇಶಕ ಪಿ.ಶರತ್ ಚಂದ್ರ ರೆಡ್ಡಿ ಅವರನ್ನು ನವೆಂಬರ್ 10, 2022ರಂದು ಬಂಧಿಸಲಾಗಿತ್ತು. ಇದಾದ ಐದು ದಿನಗಳ ನಂತರ, ನವೆಂಬರ್ 15ರಂದು ಚುನಾವಣಾ ಬಾಂಡ್ ಮೂಲಕ ಅರಬಿಂದೊ ಫಾರ್ಮಾ ರೂ. 5 ಕೋಟಿ ದೇಣಿಗೆಯನ್ನು ನೀಡಿದೆ ಎಂದು ಅವರು ಆರೋಪಿಸಿದ್ದಾರೆ.
“ಇದೇ ರೀತಿ ನವಯುಗ ಎಂಜಿನಿಯರಿಂಗ್ ಕಂಪನಿ ಲಿಮಿಟೆಡ್, ಹೈದರಾಬಾದ್ ಮೂಲದ ಶಿರ್ಡಿ ಸಾಯಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ವಿಚಾರದಲ್ಲೂ ನಡೆದಿದೆ. ಇವು ಕೇವಲ ಕೆಲವು ಮುಖ್ಯ ನಿದರ್ಶನಗಳು. ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿರುವ ಒಟ್ಟು 21 ಸಂಸ್ಥೆಗಳು ಸಿಬಿಐ, ಈಡಿ ಅಥವಾ ಆದಾಯ ತೆರಿಗೆ ಇಲಾಖೆಯ ವಿಚಾರಣೆ ಎದುರಿಸಿವೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನಿರುತ್ತರರಾಗಿದ್ದಾರೆ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಚುನಾವಣಾ ಬಾಂಡ್ ಗಳ ಅಧಿಕೃತ ಮಾರಾಟ ಸಂಸ್ಥೆಯಾದ ಭಾರತೀಯ ಸ್ಟೇಟ್ ಬ್ಯಾಂಕ್, ಚುನಾವಣಾ ಬಾಂಡ್ ಗಳ ದತ್ತಾಂಶವನ್ನು ಮಾರ್ಚ್ 12ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು.