ಮಾಜಿ ಶಾಸಕ ಕೆ. ರಘುಪತಿ ಭಟ್ರಿಂದ ಅಕ್ರಮ ರೆಸಾರ್ಟ್ ನಿರ್ಮಾಣ: ಆರೋಪ
ಉಡುಪಿ: ಬಡಾನಿಡಿಯೂರು ಕಡಲ ತೀರದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಅಕ್ರಮವಾಗಿ ರೆಸಾರ್ಟ್ ನಿರ್ಮಾಣಕ್ಕೆ ಹುನ್ನಾರ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡದೆ ತೀವ್ರ ಹೋರಾಟ ನಡೆಸ ಲಾಗುವುದು ಎಂದು ಬಡಾನಿಡಿಯೂರು ಕರಾವಳಿ ಯುವಕ ಮಂಡಲ ಮತ್ತು ಕರಾವಳಿ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂದು ಬಡಾನಿಡಿಯೂರು ಸಮುದ್ರ ತೀರದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಕರಾವಳಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶಿವಾನಂದ ಸುವರ್ಣ, ಬಡಾನಿಡಿಯೂರು ಗ್ರಾಮದ ಸರ್ವೆ ನಂಬರ್ 118ರಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ಮತ್ತು ಅವರ ಶ್ರೀನಿವಾಸ ಅಸೋಸಿಯೇಟ್ ಎಂಬ ಸಂಸ್ಥೆ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಲು ಹುನ್ನಾರ ನಡೆಸುತ್ತಿದೆ. ಇಲ್ಲಿರುವ ಸರಕಾರಿ ಜಾಗದಲ್ಲಿ ಕರಾವಳಿ ಯುವಕ ಮಂಡಲ ಕ್ರೀಡಾಂಗಣ ಹಾಗೂ ಉದ್ಯಾನವನ ನಿರ್ಮಿಸಲು ಮಣ್ಣು ಹಾಕಿದಾಗ ಮಾಜಿ ಶಾಸಕರು ಕರೆ ಮಾಡಿ ಮಣ್ಣು ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ಅಕ್ರಮವಾಗಿ ವಾಣಿಜ್ಯ ಭೂಪರಿವರ್ತನೆ ಮಾಡಲಾಗಿದೆ. ವಾಣಿಜ್ಯ ಭೂಪರಿವರ್ತನೆ ಮಾಡುವಾಗ ಕನಿಷ್ಠ 12 ಮೀಟರ್ ಅಗಲದ ರಸ್ತೆ ಇರಬೇಕು ಎಂಬ ನಗರಾಭಿವೃದ್ಧಿ ಪ್ರಾಧಿಕಾರದ ನಿಮಯ ಇದೆ. ಇಲ್ಲಿ ಇರುವುದು ಕೇವಲ 12 ಅಡಿ ಅಗಲದ ರಸ್ತೆ. ಈ ನಿಯಮವನ್ನು ಗಾಳಿ ತೂರಿ ಮತ್ತು ಸ್ಥಳೀಯ ಜನರನ್ನು ಕತ್ತಲಿನಲ್ಲಿ ಇಟ್ಟು ವಾಣಿಜ್ಯ ಭೂಪರಿವರ್ತನೆ ಮಾಡಲಾಗಿದೆ ಎಂದು ಅವರು ದೂರಿದರು.
ಈ ಪ್ರದೇಶದಲ್ಲಿ ತಲಾತಲಾಂತರದಿಂದ ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸಲಾಗುತ್ತಿದೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇದು ಸಂಪೂರ್ಣ ವಸತಿ ಪ್ರದೇಶವಾಗಿದೆ. ಇಲ್ಲಿ ಸುಮಾರು 50 ಕೋಟಿ ರೂ.ಗೂ ಅಧಿಕ ಬಂಡವಾಳ ಹಾಕಿ ಈ ದೊಡ್ಡ ಯೋಜನೆ ಮಾಡುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿ ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ರೆಸಾರ್ಟ್ನಲ್ಲಿ ಪಬ್, ಬಾರ್ಗಳು ಕೂಡ ನಿರ್ಮಿಸಬೇಕಾಗುತ್ತದೆ. ಈ ರೀತಿಯ ಸಂಸ್ಕೃತಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಸ್ಥಳೀಯ ಮೀನುಗಾರ ಸುರೇಶ್ ಬಂಗೇರ ಮಾತನಾಡಿ, ಇದು ನಮ್ಮ ಹಿರಿಯರು ಹಲವಾರು ವರ್ಷಗಳಿಂದ ಸಾಂಪ್ರಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳ. ವರ್ಷದ ಏಳು ತಿಂಗಳು ಬೋಟಿನಲ್ಲಿ ಕೆಲಸ ಮಾಡಿದರೆ, ಉಳಿದ ತಿಂಗಳು ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸಲಾಗುತ್ತಿದೆ. ಒಂದು ವೇಳೆ ಸಮುದ್ರ ತೀರಕ್ಕೆ ಹೋಗುವ ಜಾಗವನ್ನು ಬಂದ್ ಮಾಡಿ ರೆಸಾರ್ಟ್ ನಿರ್ಮಿಸಿದರೆ ಎಲ್ಲ ಮೀನುಗಾರರಿಗೆ ತೊಂದರೆ ಆಗುತ್ತದೆ. ಅಕ್ರಮವಾಗಿ ನಡೆಸುತ್ತಿರುವ ಈ ರೆಸಾರ್ಟ್ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ತೊಟ್ಟಂ ಸರ್ವಧರ್ಮ ಸಮನ್ವಯ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ಮಾತನಾಡಿ, ಕರಾವಳಿ ಪ್ರದೇಶ ಮೀನುಗಾರರಿಗೆ ಸೀಮಿತವಾದ ಪ್ರದೇಶ. ಇಲ್ಲಿ 50-60 ಮನೆಗಳು ಸರಕಾರಿ ಜಾಗದಲ್ಲಿ ಇದೆ. ಅದಕ್ಕೆ ಈವರೆಗೆ ವಾಸ್ತವ್ಯ ದೃಢೀಕರಣ ಪತ್ರ ಆಗಲಿ, ಹಕ್ಕುಪತ್ರವಾಗಲಿ ಇನ್ನೂ ದೊರೆತಿಲ್ಲ. ಆದರೆ ಈ ಬಂಡವಾಳಶಾಹಿಗಳು ಯಾವುದೇ ಕಾನೂನಿನ ಅಡೆತಡೆಗಳಿಲ್ಲದೆ ಸುಲಭವಾಗಿ ತಮ್ಮ ಕಾರ್ಯ ಮಾಡುತ್ತಿದ್ದಾರೆ. ಹಾಗಾದರೆ ಕಾನೂನು ಇರುವುದು ಬಡವರಿಗೆ ಮಾತ್ರವೇ ಶ್ರೀಮಂತ್ರಿಗೆ ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಕರಾವಳಿ ಪ್ರದೇಶ ಮೀನುಗಾರಿಕೆ ಸೀಮಿತವಾದ ಪ್ರದೇಶವಾಗಿದೆ. ಇಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಸಂಸ್ಕೃತಿ ಮತ್ತು ಧರ್ಮಕ್ಕೆ ವಿರೋಧವಾದ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಂತಹ ರೆಸಾರ್ಟ್ನಿಂದ ನಮ್ಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದುದರಿಂದ ಸರಕಾರ ಯಾವುದೇ ಕಾರಣಕ್ಕೂ ಇಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಕರಾವಳಿ ಯುವಕ ಮಂಡಲದ ಅಧ್ಯಕ್ಷ ನಾಗೇಂದ್ರ ಮೆಂಡನ್, ಕರಾವಳಿ ಮಹಿಳಾ ಮಂಡಲದ ಅಧ್ಯಕ್ಷೆ ನಳಿನಿ ಸದಾಶಿವ, ಗುರಿಕಾರ ರಾಮಪ್ಪ ಸಾಲ್ಯಾನ್, ಮುಖಂಡರಾದ ದಯಾನಂದ ಸುವರ್ಣ, ಗಂಗಾಧರ ಮೈಂದನ್, ಗೋಪಾಲ ಕರ್ಕೇರ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಧನಂಜಯ ಎಸ್.ಮೆಂಡನ್ ಸ್ವಾಗತಿಸಿ ದರು. ಮುರಳೀಧರ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
‘ನಮ್ಮ ವಿರೋಧವನ್ನು ಲೆಕ್ಕಿಸಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧ ಕೂಡ ಹೋರಾಟ ನಡೆಸಲಾಗುವುದು. ಅದೇ ರೀತಿ ಗ್ರಾಪಂಗೆ ಮುತ್ತಿಗೆ ಹಾಕಿ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ’—ಶಿವಾನಂದ ಸುವರ್ಣ, ಸ್ಥಾಪಕಾಧ್ಯಕ್ಷರು, ಕರಾವಳಿ ಯುವಕ ಮಂಡಲ