ದ.ಕ, ಉಡುಪಿ ಜಿಲ್ಲಾ ಹಾಪ್ಕಾಮ್ಸ್ಗೆ ಅಧ್ಯಕ್ಷ – ಉಪಾಧ್ಯಕ್ಷರಾಗಿ ಭಾ.ಕಿ.ಸಂ. ಬೆಂಬಲಿತ ಅಭ್ಯರ್ಥಿಗಳು
ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘ, ನಿ.(ಹಾಪ್ಕಾಮ್ಸ್)ನ ನೂತನ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಬೆಂಬಲಿತ ನಿರ್ದೇಶಕರಾದ ಸೀತಾರಾಮ ಗಾಣಿಗ ಹಾಲಾಡಿ ಹಾಗೂ ಉಪಾಧ್ಯಕ್ಷರಾಗಿ ವಿನಯ ರಾನಡೆ ಮಾಳ ಇವರು ಚುನಾಯಿತರಾಗಿರುವುದಕ್ಕೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಅಭಿನಂದನೆ ಸಲ್ಲಿಸಿದೆ.
ಸೀತಾರಾಮ ಗಾಣಿಗರವರು ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ರೈತಪರ ಹೋರಾಟಗಳ ಮೂಲಕ ಹಾಪ್ಕಾಮ್ಸ್ನ ನಿರ್ದೇಶಕರಾದವರು. ಜಿಲ್ಲೆಯ ರೈತರ ತರಕಾರಿ ಹಣ್ಣುಗಳು ಹಾಗೂ ತೋಟಗಾರಿಕಾ ಬೆಳೆಗಳಿಗೆ ಉತ್ತಮ ಮೌಲ್ಯ ಕೊಡಿಸುವ ನಿಟ್ಟಿನಲ್ಲಿ ಹಾಪ್ಕಾಮ್ಸ್ ಮೂಲಕ ಹೆಚ್ಚಿನ ಪ್ರಯತ್ನ ನಡೆಸುವ ದೃಷ್ಟಿಯಿಂದ ಭಾರತೀಯ ಕಿಸಾನ್ ಸಂಘದ ರೈತ ಪ್ರತಿನಿಧಿಗಳನ್ನು ಹಾಪ್ಕಾಮ್ಸ್ ಚುನಾವಣೆಗೆ ಸಜ್ಜುಗೊಳಿಸಿತ್ತು. ಇಂದು ಇವರ ಆಯ್ಕೆ ರೈತ ವಲಯದಲ್ಲಿ ಹಾಪ್ಕಾಮ್ಸ್ ಬಗ್ಗೆ ಆಶಾ ಭಾವನೆ ಮೂಡಿಸಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.