ಬೆಳಪು, ಪಾಂಗಾಳ,ಬೆಣ್ಣೆಕುದ್ರು ವ್ಯಕ್ತಿಗಳಿಗೆ ಕೊರೋನಾ ಪಾಸಿಟಿವ್: ಹಲವು ಪ್ರದೇಶ ಸೀಲ್-ಡೌನ್
ಕಾಪು: ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಹೋಗಿದ್ದ ಬೆಳಪು ಗ್ರಾಮದ ಹಾಗೂ ಇನ್ನಂಜೆ ಪಾಂಗಾಳ ಗುಡ್ಡೆಯ ವ್ಯಕ್ತಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಈ ಭಾಗದ ಕೆಲವೊಂದು ಪ್ರದೇಶ ಸೀಲ್-ಡೌನ್ ಮಾಡಲಾಗಿದೆ.
ರವಿವಾರ ಬೆಳಪು ಗ್ರಾಮಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಸೋಂಕು ಪತ್ತೆಯಾದ ವ್ಯಕ್ತಿಯ ಮನೆ ಪರಿಸರವನ್ನು ಸೀಲ್ ಡೌನ್ ಮಾಡಿದ್ದಾರೆ. ಮುಂಬೈನಿಂದ ಕುಟುಂಬ ಸಮೇತ ಆಗಮಿಸಿದ್ದ ಇವರು ಕಾಪುವಿನಲ್ಲಿ ಕ್ವಾರಂಟೈನ್ ಮುಗಿಸಿ ಶುಕ್ರವಾರ ಮನೆಗೆ ಬಂದಿದ್ದರು. ಈಗ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಕಾಪು ತಾಲ್ಲೂಕಿನ ಇನ್ನಂಜೆ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪಾಂಗಾಳ ಗುಡ್ಡೆ ವ್ಯಾಪ್ತಿಯಲ್ಲಿ ವ್ಯಕ್ತಿಯೊರ್ವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಸೀಲ್-ಡೌನ್ ನಡೆಸಲಾಗಿದೆ
ಸೋಂಕಿತರ ಮನೆಗೆ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಕೆ. ರವಿಶಂಕರ್, ಶಿರ್ವ ಎಸ್ಸೈ ಶ್ರೀಶೈಲ ಮುರುಗೋಡ, ಬೆಳಪು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎಚ್.ಆರ್. ರಮೇಶ್, ಗ್ರಾಮಕರಣಿಕ ಗಣೇಶ್ ಕುಮಾರ್, ಅರುಣ್ ಕುಮಾರ್ ಮೊದಲಾದವರು ಭೇಟಿ ನೀಡಿ, ಕಂಟೈನ್ಮೆಂಟ್ ವಲಯ ಮಾಡುವ ಬಗ್ಗೆ ನಿರ್ಧರಿಸಿದ್ದಾರೆ.
ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಣ್ಣೆಕುದ್ರು ಅಂಗನವಾಡಿ ಸಮೀಪದಲ್ಲಿ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಕೆಲವೊಂದು ಪ್ರದೇಶ ಸೀಲ್-ಡೌನ್ ಮಾಡಲಾಗಿದೆ.