ಉಡುಪಿ ಬಿಆರ್ಎಸ್ ಆಸ್ಪತ್ರೆ ಖಾಸಗಿಕರಣಕ್ಕೆ ಹುನ್ನಾರ- ಸರಕಾರದ ವಿರುದ್ಧ ಹಾಜಿ ಅಬ್ದುಲ್ಲಾ ಟ್ರಸ್ಟ್ ಆಕ್ರೋಶ
ಉಡುಪಿ: ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸಿದ್ದರಾಮಯ್ಯ ಸರಕಾರದ ವಿರುದ್ದ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಕಿಡಿಕಾರಿದೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಟ್ರಸ್ಟ್ ನ ಅಧ್ಯಕ್ಷ ಪಿ.ವಿ ಭಂಡಾರಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಹಾಜಿ ಅಬ್ದುಲ್ಲಾ ಅವರ ಜಾಗವನ್ನು ಪಿ.ಪಿ.ಪಿ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಲು ಖಾಸಗಿಗೆ ಕೊಟ್ಟಿತು. ಆದ್ರೆ ಆಸ್ಪತ್ರೆ ನಿರ್ಮಿಸಿದರೂ ಅದರ ನಿರ್ವಹಣೆ ಮಾಡಲು ಸಾಧ್ಯವಾಗದೇ ಮತ್ತೆ ಸರಕಾರದ ಸುಪರ್ದಿಗೆ ಆಸ್ಪತ್ರೆ ಹೋಯಿತು. ಇದೀಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈಗ ಆಸ್ಪತ್ರೆಯನ್ನು ಖಾಸಗೀಯವರಿಗೆ ಒಪ್ಪಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು ಇದನ್ನು ನಾವು ವಿರೋಧಿಸುತ್ತೇವೆ. ಪಿ.ಪಿ.ಪಿ ಮಾದರಿಯಲ್ಲಿ ಆಸ್ಪತ್ರೆಯ ನಿರ್ವಹಣೆ ಸರಿಯಾಗಿ ಆಗೋದಿಲ್ಲ. ಆದ್ದರಿಂದ ಒಂದೇ ಸರಕಾರವೇ ಈ ಆಸ್ಪತ್ರೆಯನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಸಿರಾಜ್ ಅಹಮ್ಮದ್, ಪ್ರೋ.ಮುರಳೀಧರ್ ಉಪಾಧ್ಯಾಯ, ಯೋಗೀಶ್ ಶೇಟ್ ಹಾಗೂ ಇಕ್ಬಾಲ್ ಮನ್ನಾ ಉಪಸ್ಥಿತರಿದ್ದರು.