ರಾಜಕೀಯ ಪಕ್ಷಗಳು ನಗದೀಕರಿಸದ ಚುನಾವಣಾ ಬಾಂಡ್ಗಳನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ: ಎಸ್ಬಿಐ
ಹೊಸದಿಲ್ಲಿ: ಚುನಾವಣಾ ಬಾಂಡ್ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮರುದಿನ ಭಾರತೀಯ ಸ್ಟೇಟ್ ಬ್ಯಾಂಕ್ ಅನುಸರಣಾ ಅಫಿಡವಿಟನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ರಾಜಕೀಯ ಪಕ್ಷಗಳು ನಗದೀಕರಿಸಿಕೊಳ್ಳದ ಬಾಂಡ್ಗಳನ್ನು ಗಜೆಟ್ ಅಧಿಸೂಚನೆಯಂತೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಕಾನೂನಿನ ಅನ್ವಯ ಬಾಂಡ್ಗಳ ಮಾನ್ಯತೆ ಹದಿನೈದು ದಿನಗಳಾಗಿದ್ದು, ಈ ಅವಧಿಯಲ್ಲಿ ನಗದೀಕರಿಸಿಕೊಳ್ಳದ ಬಾಂಡ್ಗಳನ್ನು 02.01-2018ರ ಅಧಿಸೂಚನೆ ಸಂಖ್ಯೆ 290ರ ಅನ್ವಯ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಅಫಿಡವಿಟ್ನಲ್ಲಿ ವಿವರಿಸಿದೆ. 2019ರ ಎಪ್ರಿಲ್ 1ರಿಂದ 2024ರ ಫೆ. 15ರ ಅವಧಿಯಲ್ಲಿ 22,217 ಬಾಂಡ್ಗಳು ಖರೀದಿಯಾಗಿದ್ದು, ಈ ಪೈಕಿ 22,030 ಬಾಂಡ್ಗಳು ನಗದೀಕರಣಗೊಂಡಿವೆ ಎಂದು ವಿವರಿಸಿದೆ.
ಪಿಎಂಎನ್ಆರ್ ಎಫ್ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯಂತೆ ಪಿಎಂಎನ್ಆರ್ಎಫ್ ಸಂಸ್ಥೆಗಳು ಅಥವಾ ವ್ಯಕ್ತಿಗಳು ನೀಡುವ ಸ್ವಯಂಪ್ರೇರಿತ ದೇಣಿಗೆಯನ್ನಷ್ಟೇ ಸ್ವೀಕರಿಸುತ್ತದೆ.
ಸುಪ್ರೀಂಕೋರ್ಟ್ನ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗಿದೆ ಎಂದು ಅಫಿಡವಿಟ್ ಸಲ್ಲಿಸಿದ ಎಸ್ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಹೇಳಿದ್ದಾರೆ. ಚುನಾವಣಾ ಬಾಂಡ್ಗಳನ್ನು ಖರೀದಿಸಿದ ದಿನಾಂಕ, ಖರೀದಿದಾರರ ಹೆಸರು, ಖರೀದಿ ಮಾಡಲಾದ ಬಾಂಡ್ ಮೌಲ್ಯ, ಬಾಂಡ್ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ನೀಡಲಾಗಿದೆ. ಚುನಾವಣಾ ಬಾಂಡ್ ಯೋಜನೆಯಡಿ ಈ ಎಲ್ಲ ನಾಲ್ಕು ಅಂಶಗಳು ರಹಸ್ಯವಾಗಿರುತ್ತವೆ. ನರೇಂದ್ರ ಮೋದಿ ಸರ್ಕಾರದ ಈ ಕ್ರಮವನ್ನು ಸುಪ್ರೀಂಕೋರ್ಟ್ ಫೆಬ್ರವರಿಯಲ್ಲಿ ಅಸಾಂವಿಧಾನಿಕ ಎಂದು ಘೋಷಿಸಿತ್ತು.
ಚುನಾವಣಾ ಬಾಂಡ್ ವಿವರಗಳನ್ನು ನೀಡಲು ಸಮಯಾವಕಾಶ ಕೇಳಿದ್ದ ಎಸ್ಬಿಐ ಮನವಿಯನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಮಾರ್ಚ್ 12ರೊಳಗೆ ಚುನಾವಣಾ ಆಯೋಗಕ್ಕೆ ಈ ವಿವರಗಳನ್ನು ನೀಡುವಂತೆ ಸೂಚಿಸಿತ್ತು.