ಕೋವಿಡ್–19: ‘ಫೆಬ್ರವರಿ ಅಂತ್ಯಕ್ಕೆ ಹತೋಟಿ’: ಸ್ವಚ್ಛತೆ ಕಾಯ್ದುಕೊಳ್ಳಲು ತಜ್ಞರ ಸೂಚನೆ

ನವದೆಹಲಿ: ‘ಭಾರತದಲ್ಲಿ ಕೋವಿಡ್‌ ಹರಡುವಿಕೆಯ ಗರಿಷ್ಠಮಟ್ಟ ಮುಗಿದಿದೆ. ಸ್ವಚ್ಛತೆ, ಅಂತರ ಕಾಯ್ದುಕೊಳ್ಳುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ 2021ರ ಫೆಬ್ರವರಿ ಅಂತ್ಯದ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕನಿಷ್ಠಮಟ್ಟಕ್ಕೆ ತಲುಪಲಿದೆ’ ಎಂದು ಕೋವಿಡ್‌ ಹರಡುವಿಕೆ ಅಧ್ಯಯನದ ತಜ್ಞರ ಸಮಿತಿ ಹೇಳಿದೆ.

ಐಐಟಿ ಹೈದರಾಬಾದ್‌ನ ಪ್ರಾಧ್ಯಾಪಕಎಂ.ವಿದ್ಯಾಸಾಗರ್‌ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 10 ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು. ‘ಭಾರತದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಗರಿಷ್ಠಮಟ್ಟ ಈಗಾಗಲೇ ಮುಗಿದಿದೆ. ಸೆಪ್ಟೆಂಬರ್‌ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷಕ್ಕಿಂತಲೂ ಹೆಚ್ಚು ಇತ್ತು. ಅಕ್ಟೋಬರ್ ಎರಡನೇ ವಾರದ ವೇಳೆಗೆ ಸಕ್ರಿಯ ಪ್ರಕರಣಗಳ ಸರಾಸರಿ ಸಂಖ್ಯೆಯು 9 ಲಕ್ಷಕ್ಕಿಂತಲೂ ಕಡಿಮೆ ಇತ್ತು. ಈಗ ಎರಡು ದಿನಗಳಿಂದ 8 ಲಕ್ಷಕ್ಕಿಂತಲೂ ಕಡಿಮೆಸಕ್ರಿಯ ಪ್ರಕರಣಗಳು ಇವೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಮತ್ತು ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿದರೆ ಮುಂದಿನ ಫೆಬ್ರುವರಿ ಅಂತ್ಯದ ವೇಳೆಗೆ ಕೋವಿಡ್‌ ನಿಯಂತ್ರಣಕ್ಕೆ ಬರಲಿದೆ’ ಎಂದು ಸಮಿತಿಯು ವಿವರಿಸಿದೆ.

‘ಸಾಮಾನ್ಯವಾಗಿ ವೈರಾಣುಗಳು ಚಳಿಗಾಲದಲ್ಲಿ ಹೆಚ್ಚು ಸಕ್ರಿಯವಾಗುತ್ತವೆ. ವಾತಾವರಣದಲ್ಲಿನ ಬದಲಾವಣೆಗೆ ಕೊರೊನಾವೈರಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ತಿಳಿದಿಲ್ಲ. ಐರೋಪ್ಯ ದೇಶಗಳಲ್ಲಿ ಉಷ್ಣಾಂಶ ಕಡಿಮೆಯಾಗುತ್ತಿರುವುದರ ಬೆನ್ನಲ್ಲೇ ಸೋಂಕು ಕ್ಷಿಪ್ರವಾಗಿ ಹರಡಲು ಆರಂಭಿಸಿದೆ. ಸುರಕ್ಷಾ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ, ಸೋಂಕು ನಮ್ಮಲ್ಲೂ ತೀವ್ರಗತಿಯಲ್ಲಿ ಏರಿಕೆಯಾಗಬಹುದು’ ಎಂದು ಸಮಿತಿಯು ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಲಾಕ್‌ಡೌನ್ ಜಾರಿಗೆ ತಂದಿದ್ದರಿಂದ ಅನುಕೂಲವಾಗಿದೆ. ಲಾಕ್‌ಡೌನ್ ಇರದೇ ಇದ್ದಿದ್ದರೆ ಜೂನ್‌ ವೇಳೆಗೆ ದೇಶದಲ್ಲಿ 1.50 ಕೋಟಿ ಜನರಿಗೆ ಸೋಂಕು ತಗುಲಿರುತ್ತಿತ್ತು. ಲಾಕ್‌ಡೌನ್ ಇದ್ದ ಕಾರಣ ಸೋಂಕು ಹರಡುವಿಕೆಯ ತೀವ್ರತೆ ಕಡಿಮೆಯಾಗಿತ್ತು. ಆ ವೇಳೆಗೆ 50 ಲಕ್ಷ ಜನರಿಗಷ್ಟೇ ಸೋಂಕು ತಗುಲಿತ್ತು. ಲಾಕ್‌ಡೌನ್ ಇದ್ದ ಕಾರಣಕ್ಕೇ ಕೋವಿಡ್‌ ಸಾವುಗಳ ಸಂಖ್ಯೆ ನಿಯಂತ್ರಣದಲ್ಲಿ ಇದೆ. ಇಲ್ಲದಿದ್ದಲ್ಲಿ ಸೆಪ್ಟೆಂಬರ್ ವೇಳೆಗೆ 26 ಲಕ್ಷ ಜನರು ಕೋವಿಡ್‌ನಿಂದ ಮೃತಪಡುವ ಅಪಾಯವಿತ್ತು ಎಂದು ಸಮಿತಿ ಹೇಳಿದೆ.

ಕೇರಳಲ್ಲಿ ಓಣಂ ಹಬ್ಬದ ವೇಳೆ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮತ್ತು ಸ್ವಚ್ಛತಾ ಮಾರ್ಗಸೂಚಿಗಳನ್ನು ಕಡೆಗಣಿಸಲಾಗಿತ್ತು. ಆನಂತರ ಸೋಂಕು ರಾಜ್ಯದಲ್ಲಿ ತೀವ್ರಗತಿಯಲ್ಲಿ ಏರಿತು. ಮಾರ್ಗಸೂಚಿಗಳನ್ನು ಕಡೆಗಣಿಸಿದ್ದರ ಪರಿಣಾಮವನ್ನು ಕೇರಳ ಈಗ ಅನುಭವಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಓಣಂಗೂ ಮೊದಲು (ಆಗಸ್ಟ್ 22) ಕೇರಳದಲ್ಲಿ 54,000 ಕೋವಿಡ್‌ ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. ಕೋವಿಡ್ ಸಾವಿನ ಸಂಖ್ಯೆ 200ರಷ್ಟು ಇತ್ತು. ಆದರೆ ಈಗ ಕೋವಿಡ್ ಪ್ರಕರಣಗಳ ಸಂಖ್ಯೆ 3.3 ಲಕ್ಷವನ್ನು ದಾಟಿದೆ, ಕೋವಿಡ್‌ ಸಾವುಗಳ ಸಂಖ್ಯೆ 1,139 ರಷ್ಟಾಗಿದೆ. ಹೀಗಾಗಿ ಹಬ್ಬಗಳ ಸಂದರ್ಭದಲ್ಲಿ ಸುರಕ್ಷಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಎಂದು ಹರ್ಷವರ್ಧನ್ ಕರೆ ನೀಡಿದ್ದಾರೆ.

ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಕಡಿಮೆ ಇದ್ದರೆ ಜಿಲ್ಲಾ ಮಟ್ಟದಲ್ಲಾಗಲೀ, ರಾಜ್ಯಮಟ್ಟದಲ್ಲಾಗಲೀ ಲಾಕ್‌‌ಡೌನ್ ಹೇರುವ ಅವಶ್ಯಕತೆ ಇಲ್ಲ ಎಂದು ತಜ್ಞರ ಸಮಿತಿ ಅಧ್ಯಕ್ಷ ಪ್ರೊ.ಎಂ.ವಿದ್ಯಾಸಾಗರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!