ಲೋಕಸಭೆ ಚುನಾವಣೆ: ಮತ್ತೆ 90 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ ಬಿಜೆಪಿ
ಹೊಸದಿಲ್ಲಿ: ಸೋಮವಾರ ತಡರಾತ್ರಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಎರಡನೇ ಸಭೆ ನಡೆಸಿರುವ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸುವ ಏಳು ರಾಜ್ಯಗಳ 90 ಅಭ್ಯರ್ಥಿಗಳನ್ನು ಅಂತಿಮಪಡಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ಸಮಿತಿ ಸಭೆಯಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಬಿಹಾರ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಅಭ್ಯರ್ಥಿಗಳನ್ನು ಅಂತಿಮಪಡಿಸಲಾಗಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್, ಪ್ರಹ್ಲಾದ್ ಜೋಶಿ, ನಿತ್ಯಾನಂದ ರಾಯ್, ಸುಶೀಲ್ ಮೋದಿ, ಕಿಶನ್ ರೆಡ್ಡಿ ಮತ್ತಿತರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಗುಜರಾತ್ನ ಬಾಕಿ ಇರುವ ಎಲ್ಲ 11 ಕ್ಷೇತ್ರಗಳ ಅಭ್ಯರ್ಥಿಗಳನ್ನು ನಿರ್ಧರಿಸಲಾಗಿದೆ. ಈಗಾಗಲೇ 7 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಮಧ್ಯಪ್ರದೇಶದ ಐದು ಕ್ಷೇತ್ರಗಳ ಪೈಕಿ ನಾಲ್ಕರ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಮಹಾರಾಷ್ಟ್ರದ 25 ಕ್ಷೇತ್ರಗಳ ಬಗ್ಗೆ, ತೆಲಂಗಾಣದ ಎಂಟು ಹಾಗೂ ಕರ್ನಾಟಕದ ಎಲ್ಲ 28 ಸ್ಥಾನಗಳ ಬಗ್ಗೆ ಚರ್ಚೆ ಇಂದಿನ ಕಾರ್ಯಸೂಚಿಯ ಲ್ಲಿತ್ತು. ಜೆಡಿಎಸ್ ಜತೆಗಿನ ಮೈತ್ರಿ ಅನ್ವಯ ಮೂರು ಸ್ಥಾನಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ.
ಆದರೆ ಬಿಹಾರ, ತಮಿಳುನಾಡು ಮತ್ತು ಒಡಿಶಾದಲ್ಲಿ ಮೈತ್ರಿ ಮಾತುಕತೆ ಮುಂದುವರಿದಿದ್ದು, ಇಲ್ಲಿನ ಅಭ್ಯರ್ಥಿಗಳನ್ನು ಅಂತಿಮಪಡಿಸುವುದು ವಿಳಂಬವಾಗಲಿದೆ. ಬಿಜೆಪಿ ಮಾರ್ಚ್ 2ರಂದು 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 34 ಮಂದಿ ಸಚಿವರು ಮತ್ತು ಇಬ್ಬರು ಮಾಜಿ ಸಿಎಂಗಳು ಸೇರಿದ್ದಾರೆ.