ಕೆ.ಜಯಪ್ರಕಾಶ್ ಹೆಗ್ಡೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಉಡುಪಿ: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆಯವರು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಲಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೂ ಕೂಡ ಇವರೇ ಆಗುವ ಎಲ್ಲ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗುತ್ತಿರುವ ಬಗ್ಗೆ ಜಯಪ್ರಕಾಶ ಹೆಗ್ಡೆಯವರು ತಮ್ಮ ಬೆಂಬಲಿಗರಿಗೆ ಮನವಿ ಮಾಡುವ ಮೂಲಕ ತಾನು ಮತ್ತೆ ಕಾಂಗ್ರೆಸ್ ಪಕ್ಷ ಸೇರುತ್ತಿದ್ದು ಸಹಕಾರ ನೀಡುವಂತೆ ಕೇಳಿಕೊಂಡಿದ್ದಾರೆ.
ಸುರ್ಜೇವಾಲಾ ಭೇಟಿ ಮಾಡಿದ ಸುಧೀರ್ ಮುರೊಳ್ಳಿ: ಸೋಮವಾರ ನಡೆದ ಸಿಇಸಿ ಸಭೆಗೂ ಮೊದಲು ಸುರ್ಜೇವಾಲಾ ಅವರನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಸುಧೀರ್ ಮುರೊಳ್ಳಿ ಅವರು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಜೊತೆ ತೆರಳಿ ಭೇಟಿ ಮಾಡಿದರು. ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೂಡ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ, ಸದ್ಯ ಬಿಜೆಪಿಯಲ್ಲಿರುವ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಸೆಳೆದುಕೊಂಡು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ. ಆದರೆ, ತಮಗೇ ಟಿಕೆಟ್ ನೀಡಬೇಕು ಎಂದು ಮುರೊಳ್ಳಿ ಬೇಡಿಕೆ ಇಟ್ಟಿದ್ದಾರೆ.
ಪಕ್ಷಕ್ಕೆ ಮರು ಸೇರ್ಪಡೆ ಹಾಗೂ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ಗೆ ಬೇಡಿಕೆ ಇಟ್ಟ ಜಯಪ್ರಕಾಶ್ ಹೆಗ್ಡೆ? ಪಕ್ಷ ಸೇರ್ಪಡೆಯಾಗ ಬೇಕಾದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್ ನೀಡಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸೂಕ್ತ ಸ್ಥಾನ ಮಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇವರ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತವಾಗಿ ಸ್ಪಂದಿಸಲಿಲ್ಲ. ಆದ್ದರಿಂದ ಆಕಾಂಕ್ಷಿಯ ರೇಸ್ನಲ್ಲಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೂ ಟಿಕೆಟ್ ಒಲಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.