ರಾಜ್ಯಾದ್ಯಂತ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭ
ಬೆಂಗಳೂರು : ರಾಜ್ಯಾದ್ಯಂತ ಮಂಗಳವಾರದಿಂದ ರಮಝಾನ್ ಉಪವಾಸ ಆರಂಭವಾಗಲಿದೆ. ರಾಜ್ಯ ಚಂದ್ರ ದರ್ಶನ ಸಮಿತಿಯ ಸದಸ್ಯ ಮೌಲಾನಾ ಮಕ್ಸೂದ್ ಇಮ್ರಾನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪವಿತ್ರ ರಮಝಾನ್ ಮಾಸದ ಚಂದ್ರ ದರ್ಶನವಾಗಿರುವುದರಿಂದ ಮಂಗಳವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರದಿಂದ ಉಪವಾಸ ಪ್ರಾರಂಭವಾಗಲಿದೆ. ಸೋಮವಾರ ಅಸ್ತಮಿಸಿದ ಮಂಗಳವಾರ ರಾತ್ರಿ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರ ನಿರ್ದೇಶನದಂತೆ ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಜುಮಾ ಮಸೀದಿಯ ಕೋಶಾಧಿಕಾರಿಯವರಾದ ಹಾಜಿ ಎಸ್.ಎಂ. ರಶೀದ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ಕೇರಳದಲ್ಲಿ ರಮಝಾನ್ ತಿಂಗಳ ಚಂದ್ರ ದರ್ಶನವಾಗಿದ್ದರಿಂದ ಮಂಗಳವಾರದಿಂದ ರಂಝಾನ್ ಪ್ರಾರಂಭ ಆಗಿರುತ್ತದೆ ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ಘೋಷಿಸಿದ್ದಾರೆ.
ಕರ್ನಾಟಕದ ಬಾಗೇಪಲ್ಲಿ, ಮೈಸೂರು ಸೇರಿದಂತೆ ಅಲಹಾಬಾದ್, ಲಕ್ನೋ, ಪಾಟ್ನಾ, ಗುಂಟೂರು, ದಿಲ್ಲಿಯಲ್ಲಿ ಚಂದ್ರ ದರ್ಶನವಾದ ಬಗ್ಗೆ ವರದಿಯಾಗಿದೆ.