ಯಕ್ಷಗಾನ ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರದ್ದು- ಡಾ.ಎಚ್.ಎಸ್.ಬಲ್ಲಾಳ್
ಉಡುಪಿ, ಮಾ.11: ಕರಾವಳಿಯ ಗಂಡು ಕಲೆಯಾಗಿ ಇಲ್ಲಿನ ಮಣ್ಣಿನ ಕಣಕಣದಲ್ಲೂ ಬೆರೆತಿರುವ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆಂದು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ತಿಳಿಸಿದ್ದಾರೆ.
ಅಂಬಾಗಿಲಿನ ಅಮೃತ್ ಗಾರ್ಡನ್ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಉಡುಪಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಲ ಸತೀಶ ಶೆಟ್ಟಿಯವರು ಯಕ್ಷಗಾನದಲ್ಲಿ ಭಾಗವತರಾಗಿ ಹೆಸರು ಗಳಿಸಿದ್ದಲ್ಲದೆ, ಟ್ರಸ್ಟ್ ಮೂಲಕ ಕಲಾವಿದರ ಶ್ರೇಯೋಭಿವೃದ್ಧಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು. ಹಾಗೂ ತನ್ನ ಬದುಕಿನೊಂದಿಗೆ ಇತರರಿಗೂ ಸಹಾಯ, ಸಹಕಾರ ಮಾಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಉಡುಪಿ ಘಟಕದಿಂದ ಸಾಕಷ್ಟು ಸತ್ಕಾರ್ಯಗಳು ನೆರವೇರಲಿ ಎಂದು ಶುಭ ಹಾರೈಸಿದರು.
ಈ ವೇಳೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಚಿಂತಕ ಪಟ್ಲ ಸತೀಶ್ ಶೆಟ್ಟಿಯವರು. ಸಂಬಂಧ, ಮಾನವೀಯತೆ, ಅಸಮಾನತೆಯನ್ನು ಎದುರಿಸುತ್ತಿರುವ ಸಮಾಜವನ್ನು ಸರಿಪಡಿಸಲು ಯಕ್ಷಗಾನದಿಂದ ಸಾಧ್ಯವಿದೆ. ಅಂತರಂಗವನ್ನು ತೆರೆಸಬಲ್ಲ ಶಕ್ತಿಯುಳ್ಳ ಕಲೆಗೆ ಇನ್ನಷ್ಟು ಮಾನ್ಯತೆ ದೊರಕಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರು ಉಡುಪಿ ಘಟಕದ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು.
ಯಕ್ಷಗಾನ ಪ್ರಸಂಗಕರ್ತ ಪ್ರೊ| ಪವನ್ ಕಿರಣಕೆರೆ ಅವರು ಮಾತನಾಡಿ, ‘ಪಟ್ಲ’ ಎನ್ನುವುದು ಒಂದು ಬ್ರ್ಯಾಂಡ್ ಆಗಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿದ ಪ್ರೊ| ಹರಿಕೃಷ್ಣ ಭಟ್ ಅವರು ಮಾತನಾಡಿ, ಇಲ್ಲಿನ ಯುವಕರಿಗೆ ಜಪಾನ್ ಭಾಷೆ ಕಲಿಸುವುದರೊಂದಿಗೆ ಜಪಾನ್ ಕಂಪೆನಿಗಳಲ್ಲಿಉದ್ಯೋಗಕ್ಕೆಸಹಾಯಮಾಡುವುದಾಗಿ ತಿಳಿಸಿದರು. ಇದೇ ವೇಳೆ ಶ್ರೀಪಾವಂಜೆ ಮೇಳದವರಿಂದ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಪುರುಷೋತ್ತಮ ಪಿ.ಶೆಟ್ಟಿ ಕೆ.ದಿವಾಕರ ಶೆಟ್ಟಿ ತೋಟದಮನೆ, ಇಂದ್ರಾಳಿ ಯಕ್ಷಗಾನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷ ಪಿ.ಕಿಶನ್ ಹೆಗ್ಡೆ,ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಸುರೇಶ್ ರೈ, ಟ್ರಸ್ಟ್ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ,ಪ್ರದೀಪ್ ಆಳ್ವ,ರವಿ ಶೆಟ್ಟಿ ಅಶೋಕನಗರ, ಉಡುಪಿ ಘಟಕದ ಉಪಾಧ್ಯಕ್ಷರಾದ ಡಾ| ಸುನಿಲ್ ಮುಡ್ಕೂರು ಆನಂದ ಮಡಿವಾಳ, ಹರಿಪ್ರಸಾದ್ ರೈ, ಡಾ| ಸಾಯಿ ಗಣೇಶ್, ಸಂಚಾಲಕ ಸುಧಾಕರ ಆಚಾರ್ಯ, ಜತೆಕಾರ್ಯದರ್ಶಿ ರತನ್ ರಾಜ್ ರೈ ಮಣಿಪಾಲ,ಕಾರ್ತಿಕ್ ಎಸ್.ರಾವ್, ಹರ್ಷಿತ್ ಜೋಷಿ ಮಣಿಪಾಲ, ಚಿರಾಗ್ ಹೆಗ್ಡೆ ಬೈಲೂರು, ಭುವನ ಪ್ರಸಾದ್ ಹೆಗ್ಡೆ, ಗೌರವ ಮಾರ್ಗದರ್ಶಕರು, ಸದಸ್ಯರು ಉಪಸ್ಥಿತರಿದ್ದರು.
ಉಡುಪಿ ಘಟಕದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕಾರ್ಯದರ್ಶಿ ಡಾ| ಹರೀಶ್ ಜೋಷಿ ವಿಟ್ಲ ನಿರೂಪಿಸಿದರು. ಉಪಾಧ್ಯಕ್ಷ ಡಾ| ಸುನಿಲ್ ಮುಡ್ಕೂರು, ತಾರಾ ಆಚಾರ್ಯ ಪರಿಚಯಿಸಿದರು. ಮಹೇಂದ್ರ ಆಚಾರ್ಯ ಹೇರಂಜೆ ವಂದಿಸಿದರು.