ಅಯೋಧ್ಯೆಯಲ್ಲಿ ಪಾಂಡುರಂಗ ಶಾನುಭಾಗ ಹೃದಯಾಘಾತದಿಂದ ನಿಧನ
ಉಡುಪಿ ಮಾ.10(ಉಡುಪಿ ಟೈಮ್ಸ್ ವರದಿ): ಉಡುಪಿಯ ಸಂಘದ ಹಿರಿಯ ಸಕ್ರಿಯ ಮತ್ತು ರಾಷ್ಟ್ರಭಕ್ತ ಪಾಂಡುರಂಗ ಶಾನುಭಾಗರು ಅಯೋಧ್ಯೆಯಲ್ಲಿ ಭಾನುವಾರ ಮಧ್ಯಾಹ್ನ ರಾಮಮಂದಿರದ ಸಮೀಪದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಿಗ್ಗೆ ರಾಮನ ದರ್ಶನ ಪಡೆದು ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸಿ ಪೇಜಾವರ ಶ್ರೀಗಳಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂತೋಷದಿಂದ ತೆರಳಿದ್ದರು. ಆ ಬಳಿಕ ಮಧ್ಯಾಹ್ನದ ವೇಳೆ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ಗೇಟ್ ಬಳಿಯಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಮೀಪವರ್ತಿಗಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ದೈಹಿಕ ಅಂಧತ್ವವಿದ್ದರೂ ಜೀವನ ಪರ್ಯಂತ ಹಿಂದು ಸಿದ್ಧಾಂತಕ್ಕಾಗಿ ಸಂಘದಲ್ಲಿ ಅತ್ಯಂತ ಸಕ್ರಿಯರಾಗಿದ್ದ ಶಾನುಭಾಗರು ಅಪೂರ್ವ ಚಿಂತಕರೂ ರಾಷ್ಟ್ರ ಭಕ್ತರೂ ಆಗಿದ್ದರು.
ಬೆಳಿಗ್ಗೆ ಶಾನಾಭಾಗರಿಗೆ ಸಂತೋಷದಿಂದ ತೀರ್ಥಪ್ರಸಾದ ನೀಡಿ, ಸಂಸ್ಕೃತದಲ್ಲೇ ಸಂಭಾಷಣೆ ನಡೆಸಿ ಕುಶಲೋಪರಿ ನಡೆಸಿದ್ದ ಪೇಜಾವರ ಶ್ರೀಗಳು ಈ ಸುದ್ದಿ ತಿಳಿದು ಆಘಾತ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ರಾಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.