ಸಿದ್ದರಾಮಯ್ಯ ಜ್ಞಾನಪರಿಜ್ಞಾನ ಇಲ್ಲದಂತೆ ಮಾತನಾಡುತ್ತಿರುವುದು ದುರದೃಷ್ಟಕರ: ಎಂ.ಕೆ. ಪ್ರಾಣೇಶ್
ಉಡುಪಿ: ಕೇಂದ್ರ ಬಿಜೆಪಿ ಸರಕಾರ ಭ್ರಷ್ಟಾಚಾರದ ಆರೋಪ ಇಲ್ಲದೆ ಕೆಲಸ ಮಾಡಿದೆ. ಆದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ಕೇಂದ್ರ ಸರಕಾರ ಯಾವುದೇ ಸಹಕಾರ ನೀಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ನೀಡುತ್ತಿಲ್ಲ ಎನ್ನುವ ಆರೋಪಗಳನ್ನು ಹೊರಿಸಿ ಜನರನ್ನು ದಿಕ್ಕಿ ತಪ್ಪಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. 15 ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜ್ಞಾನಪರಿಜ್ಞಾನ ಇಲ್ಲದಂತೆ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಹಣ, ನಮ್ಮ ತೆರಿಗೆ ಹೇಳುತ್ತಾರೆ. ಆದ್ರೆ ಯಾವ ಯಾವ ರಾಜ್ಯಗಳಿಗೆ ಎಷ್ಟೆಷ್ಟು ಹಣ ಬರಬೇಕೆಂಬುವುದನ್ನು ಅವರು ಅವಲೋಕನ ಮಾಡಿಕೊಳ್ಳಲಿ. ರಾಜಕೀಯ ತೀಟೆ ತೆವಲಿಗೋಸ್ಕರ ಸಿಕ್ಕ ಸಿಕ್ಕಲ್ಲಿ ಭಾಷಣ ಮಾಡಬೇಡಿ ಎಂದು ಗುಡುಗಿದರು. ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೈತಿಕತೆಯ ಆಧಾರದ ಮೇರೆಗೆ ಚುನಾವಣೆಗೆ ಹೋಗುತ್ತದೆ. ಜನಸಾಮಾನ್ಯರಿಗೆ ಕೊಟ್ಟಿರುವ ಆಶೋತ್ತರ ಈಡೇರಿಸಿದ್ದೇವೆ. ಮೋದಿ ಆಡಳಿತದಲ್ಲಿ ಭಾರತ ಐದನೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಗಳಾದ ರೇಷ್ಮಾ ಉದಯ್ ಶೆಟ್ಟಿ, ರಾಘವೇಂದ್ರ ಕಿಣಿ, ಜಿಲ್ಲಾ ವಕ್ತಾರ ವಿಜಯ್ ಕುಮಾರ್ ಉಪಸ್ಥಿತರಿದ್ದರು.