ಕೊರೋನ ಪರೀಕ್ಷೆ ದರ ನಿಗದಿ: ಖಾಸಗಿ ಲ್ಯಾಬ್ ಗಳಿಗೆ ಸಚಿವರ ಖಡಕ್ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರ್ಕಾರದಿಂದ ಖಾಸಗಿ ಲ್ಯಾಬ್ ಗಳ ಕೊರೋನಾ ಪರೀಕ್ಷಾ ದರವನ್ನು ಮತ್ತೆ ಪರಿಷ್ಕರಣೆ ಮಾಡಿದೆ. ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್ ಪರೀಕ್ಷೆಗೆ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ವೈದ್ಯಕೀಯ ಸಚಿವ ಡಾ. ಸುಧಾಕರ್ ಖಾಸಗಿ ಲ್ಯಾಬ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸುಧಾಕರ್, ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್-19 ಪರೀಕ್ಷೆಗೆ ನಿಗದಿಪಡಿಸಲಾಗಿದ್ದ ದರಗಳನ್ನು ತಾಂತ್ರಿಕ ಸಲಹಾ ಸಮಿತಿ ಮರುಪರಿಶೀಲಿಸಿದ್ದು, ಪರಿಷ್ಕೃತ ದರಪಟ್ಟಿಯನ್ನು ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
ಸರ್ಕಾರ ನಿಗದಿ ಮಾಡಿರುವ ಗರಿಷ್ಠ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ಲ್ಯಾಬ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸರಕಾರದ ಪ್ರಯೋಗಾಲಯಗಳು ಮಾತ್ರವಲ್ಲದೆ ಐಸಿಎಂಆರ್ ಅನುಮೋದಿತ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್ 19 ಪರೀಕ್ಷೆಗೆ ಅನುಮತಿ ನೀಡಲಾಗಿತ್ತು. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದ ಹಿನ್ನೆಲೆ ಅನುಮತಿ ನೀಡಲಾಗಿತ್ತು.
ಆದರೆ ಕೆಲವು ಖಾಸಗಿ ಪ್ರಯೋಗಾಲಯಗಳು ಹೆಚ್ಚಿನ ಮೊತ್ತವನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ದೂರು ಸಾರ್ವಜನಿಕ ವಲಯದಿಂದ ಕೇಳಿ ಬಂದ ಹಿನ್ನೆಲೆ ನಿಗದಿಪಡಿಸಲಾಗಿದ್ದ ದರಗಳನ್ನು ತಾಂತ್ರಿಕ ಸಲಹಾ ಸಮಿತಿ ಮರುಪರಿಶೀಲನೆ ನಡೆಸಿ, ಪರಿಷ್ಕೃತ ದರಪಟ್ಟಿಯನ್ನು ನಿಗದಿ ಮಾಡಿ ಸರಕಾರ ಆದೇಶ ಹೊರಡಿಸಿದೆ.