ಕಾಪು ಕೊರಗಜ್ಜ ಗುಡಿಯ ಪೂಜೆ ವಿಚಾರದಲ್ಲಿ ಹೊಡೆದಾಟ: ದೂರು-ಪ್ರತಿದೂರು ದಾಖಲು
ಪಡುಬಿದ್ರಿ ಮಾ.9(ಉಡುಪಿ ಟೈಮ್ಸ್ ವರದಿ): ಕಾಪುವಿನ ಹೆಜಮಾಡಿ ಗ್ರಾಮದಲ್ಲಿ ಕುಟುಂಬದ ಕೊರಗಜ್ಜ ದೈವದ ಗುಡಿಯ ಪೂಜೆಯ ವಿಚಾರದಲ್ಲಿ ನಡೆದಿರುವ ಗಲಾಟೆ, ಹಲ್ಲೆ ವಿಚಾರವಾಗಿ ಪಡುಬಿದ್ರೆ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಹೆಜಮಾಡಿ ಗ್ರಾಮದ ಜಾಮದಾರ್ ತೋಟ ಎಂಬಲ್ಲಿನ ದೀನನಾಥ ಎಂಬವರು ಈ ಬಗ್ಗೆ ನೀಡಿರುವ ದೂರಿನಲ್ಲಿ ತಮ್ಮ ಸಂಬಂಧಿ ಏಕನಾಥ ಅವರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ದೀನನಾಥ ಹಾಗೂ ಅವರ ತಾಯಿಯ ತಮ್ಮ ಏಕನಾಥ ಎಂಬುವರಿಗೆ ಕುಟುಂಬದ ಜಾಗದ ವಿಚಾರದಲ್ಲಿ ಹಾಗೂ ಆ ಜಾಗಲ್ಲಿರುವ ಕೊರಗಜ್ಜ ದೈವದ ಗುಡಿಯ ಪೂಜೆ ಮಾಡುವ ವಿಚಾರದಲ್ಲಿ ತಕರಾರು ಇತ್ತು. ಇದೇ ವಿಚಾರದಲ್ಲಿ ಏಕನಾಥನು ದೀನನಾಥ ಅವರ ಮನೆಯ ಬಳಿ ಬಂದು ಅವಾಚ್ಯ ಶಬ್ಧಗಳಿಂದ ಬೈದು ಹೋಗುತ್ತಿದ್ದನು. ಅದೇ ರೀತಿ ಮಾ.8 ರಂದು ಶಿವರಾತ್ರಿ ಹಬ್ಬ ಇರುವುದರಿಂದ ರಾತ್ರಿ 8 ಗಂಟೆಯ ವೇಳೆಗೆ ಕೊರಗಜ್ಜ ಗುಡಿಗೆ ಹೋಗಿ ಪೂಜೆ ಮಾಡಿ ನೈವೇದ್ಯ ಇಡುತ್ತಿರುವಾಗ ಕತ್ತಿಯನ್ನು ಹಿಡಿದುಕೊಂಡು ಬಂದ ಏಕನಾಥ ಅವರು ದೀನ ನಾಥ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಯ ಕತ್ತಿಯನ್ನು ಕುತ್ತಿಗೆಗೆ ಬೀಸಿದ್ದು, ಈ ವೇಳೆ ಕತ್ತಿ ದೀನನಾಥ ಅವರ ತಲೆಗೆ ತಾಗಿ ಸೀಳಿದ ಗಾಯವಾಗಿದೆ. ಈ ಬಗ್ಗೆ ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ
ಇನ್ನು ಇದೇ ವಿಚಾರದಲ್ಲಿ ಏಕನಾಥ ಅವರೂ ಪೊಲೀಸರಿಗೆ ಪ್ರತಿದೂರು ನೀಡಿದ್ದು, ಅದರಂತೆ ಕಳೆದ ಸುಮಾರು 30 ವರ್ಷಗಳಿಂದ ಇಲ್ಲಿನ ಕೊರಗಜ್ಜ ದೈವರ ಗುಡಿಗೆ ಪೂಜೆ ಮಾಡಿಕೊಂಡು ಬರುತ್ತಿರುವ ಏಕನಾಥ ಅವರಿಗೆ ಈ ವಿಚಾರದಲ್ಲಿ ಅವರ ಅಕ್ಕನ ಮಕ್ಕಳು ಮತ್ತು ಅಣ್ಣನ ಮಕ್ಕಳು ತಕರಾರು ಮಾಡಿ ಆಗಾಗ ಬೈಯುತ್ತಿದ್ದರು. ಎಂದಿನಂತೆ ಏಕನಾಥ ಅವರು ಮಾ.8 ರಂದು ರಾತ್ರಿ ಕೊರಗಜ್ಜ ಗುಡಿಗೆ ಹೋಗಿ ಪೂಜೆ ಮಾಡುತ್ತಿರುವ ಸಮಯ ಅವರ ಅಕ್ಕನ ಮಗ ದೀನನಾಥ ಹಾಗೂ ಅವರ ನೆರೆಮನೆಯ ಅಕ್ಷಯ ಎಂಬುವರು ಕೈಯಲ್ಲಿ ಮರದ ರೀಪು ಮತ್ತು ತೆಂಗಿನ ಮರದ ಹಿಡಿಮಂಡೆಯನ್ನು ಹಿಡಿದುಕೊಂಡು ಬಂದು ಏಕನಾಥ ಅವರಿಗೆ ಅವಾಚ್ಯವಾಗಿ ಬೈದು ಮರದ ರೀಪಿನಿಂದ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಅವರು ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ಪ್ರತಿದೂರು ದಾಖಲಾಗಿದೆ.