ಉಡುಪಿ: ಕಪ್ಪು ಉಡುಗೆಯಲ್ಲಿ ಮೌನ ಜಾಗೃತಿ ಕಾರ್ಯಕ್ರಮ
ಉಡುಪಿ: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ- ಮಹಿಳಾ ಚೈತನ್ಯ ದಿನದ ಪ್ರಯುಕ್ತ ‘ನಮ್ಮ ಉಡುಪು ನಮ್ಮ ಹಕ್ಕು’ ಮೌನ ಜಾಗೃತಿ ಕಾರ್ಯಕ್ರಮವನ್ನು ಉಡುಪಿ ನಗರದ ಜೋಡುಕಟ್ಟೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಧರ್ಮಗುರು ಫಾದರ್ ವಿಲಿಯ ಮಾರ್ಟಿಸ್, ರತಿ ರಾವ್, ಡಾ.ಅರುಂಧತಿ, ರುಬಿನಾ ಅಬ್ದುಲ್ ರಝಾಕ್, ಮಲ್ಲಮ್ಮ ಯಾಳವಾರ ಕಪ್ಪು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ನಂತರ ನೂರಾರು ಮಂದಿ ಕಪ್ಪು ಉಡುಪು ಧರಿಸಿ ಜೋಡುಕಟ್ಟೆಯಿಂದ ಕೋರ್ಟ್ ರಸ್ತೆಯವರೆಗೆ ಕ್ಯಾಂಡಲ್ ಹಚ್ಚಿಸಿ ಒಂದು ಗಂಟೆಗಳ ಕಾಲ ಮೌನ ಆಚರಿಸಿದರು.
‘ಅಕ್ರಮಸ, ದೌರ್ಜನ, ಹಿಂಸೆ ವಿರುದ್ಧ ಪ್ರತಿರೋಧವನ್ನು ಸಲ್ಲಿಸುವ ಅಹಿಂಸಾತ್ಮಕವಾದ ಮಾರ್ಗ ಇದಾಗಿದೆ. ಆ ಹಿನ್ನೆಲೆ ಯಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಈ ರೀತಿಯಾಗಿ ವಿರೋಧಿಸಲಾಗುತ್ತ ದೆ. ಬೀದಿಗೆ ಒಂದು ಶಕ್ತಿ ಇದೆ. ಬರವಣಗೆ, ಭಾಷಣ, ಹೋರಾಟ ರೀತಿಯಲ್ಲಿ ಒಂದು ತಾಸು ಮೌನವಾಗಿ ಬೀದಿಯಲ್ಲಿ ನಿಲ್ಲುವುದು ಕೂಡ ಒಂದು ರೀತಿಯ ಪ್ರತಿರೋಧವಾಗಿದೆ. ಕಪ್ಪು ಅಶುಭದ ಸಂಕೇತ ಅಲ್ಲ. ಅದು ದಿಟ್ಟತನ ಹಾಗೂ ಧೈರ್ಯದ ಸಂಕೇತವಾಗಿದೆ ಎಂದು ಒಕ್ಕೂಟದ ಪ್ರಮುಖರಾದ ಡಾ.ಎಚ್. ಎಸ್. ಅನುಪಮಾ ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ವಾಣಿ ಪೆರೋಡಿ, ರೇಖಾಂಬಾ, ಜಾನೆಟ್ ಬಾರ್ಬೊಜಾ, ವರೋನಿಕಾ ಕರ್ನೆಲಿಯೋ, ಗೌರಿ ಬೆಂಗಳೂರು, ಹುಮೈರಾ ಕಾರ್ಕಳ, ಕುಲ್ಸುಮ್ ಅಬೂಬಕ್ಕರ್, ಗೀತಾ ಬೈಂದೂರು, ಪ್ರೊ.ಫಣಿರಾಜ್, ಡಾ.ಸುನೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಶಾಂತಿ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.