ಉಡುಪಿ: ಮಹಿಳಾ ಚೈತನ್ಯ ದಿನ
ಉಡುಪಿ: ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ,ಉಡುಪಿ ಜಿಲ್ಲಾ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಆರೂರು ಲಕ್ಷ್ಮೀ ನಾರಾಯಣ ರಾವ್ ಸ್ಮಾರಕ, ಪುರಭವನ ಉಡುಪಿಯ ಸಭಾಂಗಣದಲ್ಲಿ ಮಹಿಳಾ ಚೈತನ್ಯ ದಿನ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಆಶಯ ನುಡಿಗಳನ್ನಾಡಿದ ಲೇಖಕರು, ವಕೀಲರಾದ ಎ.ಅರುಳ್ ಮೌಳಿ, “ಇಂದಿನ ಮಹಿಳೆಯು ಯಾವ ಹಿನ್ನಲೆಯವಳಾಗಿದ್ದರೂ ಕೂಡ ಮಹಿಳೆಯಾಗಿ ಉಳಿಯಬೇಕಾದ ಅವಶ್ಯಕತೆ ಇದೆ. ಇಂದು ಕಾರ್ಯ ನಿರತ ಮಹಿಳೆಯರ ದಿನಾಚರಣೆಯಾಗಿದೆ. ಇದು ಕೇವಲ ಹ್ಯಾಪಿ ವುಮೆನ್ಸ್ ಡೆ, ಅಥವಾ ಪೌಂಡ್ಸ್ ವುಮೆನ್ಸ್ ಡೆ ಅಲ್ಲ” ಎಂದು ಹೇಳಿದರು.
ಹೆಣ್ಣಿನ ಬಳಿ ನಿಮ್ಮ ಮನೆ ಎಲ್ಲಿ ಎಂದು ಕೇಳಿದಾಗ ಅಪ್ಪನ ಮನೆ, ಗಂಡನ ಮನೆ ತೋರಿಸುತ್ತಾಳೆ. ಅವಳು ಪೂಜಿಸುವ ದೇವರು ಗಂಡನ ಮನೆಯ ದೇವರು, ಅಪ್ಪನ ಮನೆಯ ದೇವರಾಗಿರುತ್ತದೆ. ಅವಳಿಗೆ ಅವಳಾದ್ದದ ಪರಿಚಯ ಇಲ್ಲದಂತಾಗಿದೆ ಎಂದರು.
ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಜೊತೆಯಾಗಿದ್ದಾರೆ.ಇದಕ್ಕೆ ನಾವು ಅನುಭವಿಸುವ ನೋವು ಪ್ರಮುಖ ಕಾರಣ. ಹೆಣ್ಣೊಬ್ಬಳು ಯಾರಿಗೋಸ್ಕರ ಬದುಕಬೇಕು ಅಥವಾ ನಮಗೋಸ್ಕರ ಬದುಕಬೇಕಾ ಎಂಬುವುದನ್ನು ನಾವು ಅರಿತುಕೊಳ್ಳಬೇಕು ಎಂದರು.
ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರ ಮಾಡಿ ಸಮಾಧಾನವಾಗದೆ ಇದ್ದಾಗ ಗುಪ್ತಾಂಗಕ್ಕೆ ಕಬ್ಬಿಣದ ರಾಡ್’ನ್ನು ಗುಪ್ತಾಂಗಕ್ಕೆ ತುರಿಸಿ ಕ್ರೂರತನ ಮೆರೆಯುವ ಮನಸ್ಥಿತಿ ಎಲ್ಲಿಂದ ಬಂದಿದೆ ಎಂಬುವುದು ಮುಖ್ಯ. ಹುಟ್ಟುವಾಗ ಗಂಡು ಮಕ್ಕಳಲ್ಲಿ ಈ ಡಿ.ಎನ್.ಎ ಇರುವುದಿಲ್ಲ ಬದಲಾಗಿ ಈ ಡಿಎನ್ಎ ಸಮಾಜದಿಂದ ಬರುತ್ತದೆ. ಗಂಡು ಎಂದು ಬೆಳೆಸುವ ಸಮಾಜದಿಂದ ಅವರಲ್ಲಿ ಈ ಗುಣ ಬೆಳೆಯುತ್ತ ಹೋಗುತ್ತದೆ ಎಂದರು.
ಅತ್ಯಾಚಾರ ಆರೋಪಿಗಳ ಪರವಾಗಿಯೂ ವಕೀಲರು ಪ್ರತಿನಿಧಿಯಾಗಬೇಕಾಗುತ್ತದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಿರ್ಬಯಾ ಪ್ರಕರಣದ ಸಂತ್ರಸ್ಥೆಯ ಕುರಿತು ಅವರಿಲಿದ್ದ ನಿಲುವು ಅಪಾಯಕಾರಿಯಾಗಿದೆ. ಕತುವಾ ಆಸೀಫಾ ಅತ್ಯಾಚಾರ ಪ್ರಕರಣ, ಬಿಲ್ಕೀಸ್ ಬಾನು ಪ್ರಕರಣದಲ್ಲಿ ಈ ಮನಸ್ಥಿತಿಗಳು ಅನಾವರಣ ವಾಗಿದೆ. ಪುರುಷರು ತಮ್ಮ ಅಕ್ರಮ ತೃಪ್ತಿಗಾಗಿ ಮಾತ್ರ ಅತ್ಯಾಚಾರ ನಡೆಸುವುದಲ್ಲ ಬದಲಾಗಿ ಪುರಷಾಧಿಪತ್ಯದ ಸಂಕೇತವಾಗಿ “ಅತ್ಯಾಚಾರ” ವನ್ನು ಬಳಸಲಾಗುತ್ತದೆ ಎಂದರು.
ಮಕ್ಕಳನ್ನು ಮಕ್ಕಳಾಗಿ ಬೆಳೆಸುವ ಬದಲಾಗಿ ಗಂಡು – ಹೆಣ್ಣಾಗಿ ಬೆಳೆಸುತ್ತೇವೆ. ಹೆಣ್ಣನ್ನು ಹೆಚ್ಚು ಜಾಗರೂಕರಾಗಿ ಬೆಳೆಸಬೇಕು.ಹುಡುಗರ ಸಂಪರ್ಕವನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕೆಂದು ಕರೆ ನೀಡಿದರು.
ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳನ್ನು “ಉತ್ತಮ ಗುಣ ನಡತೆಯ” ಆಧಾರದಲ್ಲಿ ಬಿಡುಗಡೆ ಮಾಡಿದಾಗ ಮಹಿಳೆಯರು ಆರತಿ ಎತ್ತಿ ಸ್ವಾಗತಿಸುತ್ತಾರೆ. ಇದು ದುರಂತವಾಗಿದೆ. ಮಹಿಳೆಯ ಮೇಲೆ ನಡೆಯುವ ದೌರ್ಜನ್ಯದ ಕುರಿತು ಜಾತಿ-ಧರ್ಮ- ಅರ್ಥಿಕ ತಾರತಮ್ಯದ ಹೊರತಾಗಿ ದನಿಯೆತ್ತಬೇಕೆಂದು ಕರೆ ನೀಡಿದರು.
ಡಾ.ನಿಕೇತನ ಅಧ್ಯಕ್ಷೀಯ ಭಾಷಣ ಮಾಡಿದರು. ಪ್ರಸ್ತಾವಿಕವಾಗಿ ರೇಖಾಂಬ ಟಿ.ಎಲ್ ಮಾತನಾಡಿದರು.
ಸಭಾಂಗಣದಲ್ಲಿ ನೆರೆದಿದ್ದ ಮಹಿಳೆಯರು ‘ಸಿಳ್ಳೆ’ ಹೊಡೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳೆಯರು ಸಿಳ್ಳೆ ಹೊಡೆಯಬಾರದೆಂಬ ನೀತಿಯ ವಿರುದ್ಧ ನಾವು ಈ ಸಿಳ್ಳೆ ಹೊಡೆದು ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಜನೇಟ್ ಬರ್ಬೋಝಾ, ಸುನಂದಾ ಕಡಮೆ, ಬಾ.ಹ ರಮ ಕುಮಾರಿ, ರೇಖಾಂಬ ಟಿ.ಎಲ್, ನಾಗೇಶ್ ಉದ್ಯಾವರ ಉಪಸ್ಥಿತರಿದ್ದರು. ಸಿನಿ ಡಿಸೋಜಾ, ಪವಿತ್ರ ಬಿಕ್ಕನಗೋಡು ನಿರೂಪಿಸಿದರು.