“ಆರಾಟ” ಕನ್ನಡ ಸಿನಿಮಾ ಶೀಘ್ರದಲ್ಲೇ ತೆರೆಗೆ
ಮಂಗಳೂರು: ಪಿಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರ ಬೀಡು ನಿರ್ದೇಶನದ “ಆರಾಟ” ಕನ್ನಡ ಸಿನಿಮಾ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದ್ದು ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆ ಗೊಳಿಸಲಾಯಿತು.
ಸಿನಿಮಾ ಕುರಿತು ಮಾಹಿತಿ ನೀಡಿದ ಚೇತನ್ ರೈ ಮಾಣಿ ಅವರು, “ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿಭಾಗಗಳಾದ ಮುಡಿಪು, ಆನೇಕಲ್ಲು, ಉಪ್ಪಳ, ಮಂಗಲ್ಪಾಡಿ ಹಾಗೂ ಕುಬಣೂರು ಪರಿಸರದಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ.
ಸುಮಾರು 20 ದಿನಗಳ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದ್ದು ಪಿಎನ್ ಆರ್ ಬ್ಯಾನರ್ ನಲ್ಲಿ ನಿರ್ಮಿಸಿದ “ಆರಾಟ” ಕನ್ನಡ ಚಲನಚಿತ್ರಕ್ಕೆ ರಾಘವೇಂದ್ರ ಹೊಳ್ಳ ಟಿ, ರಾಂಪ್ರಸಾದ್ ಕೆ, ನಿತೇಶ್ ಮಾಡಮ್ಮೆ ಹಾಗೂ ಸ್ನೇಹಿತರು ಬಂಡವಾಳ ಹೂಡಿದ್ದಾರೆ” ಎಂದು ಮಾಹಿತಿ ನೀಡಿದರು. ಬಳಿಕ ಮಾತಾಡಿದ ನಿರ್ದೇಶಕ ಪುಷ್ಪರಾಜ್ ರೈಮಲಾರಬೀಡು ಅವರು, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದ್ದು ಕರಾವಳಿಯ ಜನಜೀವನಕ್ಕೆ ತೀರಾ ಹತ್ತಿರವಾಗಿದೆ.
ಹಾಡುಗಳು ಚೆನ್ನಾಗಿದ್ದು ಸುಂದರವಾದ ಲೊಕೇಶನ್ ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜನರಿಗೆ ಸಂಪೂರ್ಣ ಮನೋರಂಜನೆ ನೀಡಲು ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಪ್ರೇಕ್ಷಕರು ಖಂಡಿತ ಇಷ್ಟಪಡುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪುಷ್ಪರಾಜ್ ರೈ ಮಲಾರಬೀಡು , ನಿರ್ಮಾಪಕ ರಾಘವೇಂದ್ರ ಹೊಳ್ಳ, ಚೇತನ್ ರೈ ಮಾಣಿ, ಪುಷ್ಪರಾಜ್ ರೈ ಮಲಾರಬೀಡು, ಸಂದೀಪ್ ಭಕ್ತ, ವೆನ್ಯ ರೈ, ರಂಜನ್, ಉದಯ್ ಆಳ್ವ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ಕುರಿತು: ಸಿನಿಮಾದ ಮೂಲಕತೆ ರಾಘವೇಂದ್ರ ಹೊಳ್ಳ ಅವರದ್ದಾಗಿದ್ದು ಚಿತ್ರಕತೆ ಸಂಭಾಷಣೆ ನಿರ್ದೇಶನದ ಜವಾಬ್ದಾರಿಯನ್ನು ಪುಷ್ಪರಾಜ್ ರೈ ಮಲಾರಬೀಡು ವಹಿಸಿದ್ದಾರೆ.
ನಿರ್ದೇಶನ ತಂಡದಲ್ಲಿ ಜಯರಾಜ್ ಹೆಜಮಾಡಿ, ರೋಷನ್ ಆಳ್ವ, ಹರ್ಷರಾಜ್ ಬಂಟ್ವಾಳ, ಅಭಿ ಬೋಳ್ಯಾರ್, ಸುಶಿನ್ ದುಡಿದಿದ್ದಾರೆ. ಕ್ಯಾಮರಾ ರವಿ ಸುವರ್ಣ, ಸಂಕಲನ ದಾಮು ಕನಸೂರ್, ಸಂಗೀತ ರಾಘವೇಂದ್ರ ಬೀಜಾಡಿ ಹಾಗೂ ಶಮೀರ್ ಮುಡಿಪು, ವಸ್ತ್ರ ವಿನ್ಯಾಸ ಶರತ್ ಪೂಜಾರಿ ಮಂಗಳೂರು, ಪ್ರಸಾಧನ ಚರಣ್ ರಾಜ್ ಪಚ್ಚಿನಡ್ಕ, ಕಲಾ ವಿನ್ಯಾಸ ಹರೀಶ್ ಆಚಾರ್ಯ, ಸ್ಥಿರ ಚಿತ್ರಣ ನವನೀತ್ ವಿಠ್ಠಲ್
ಪಬ್ಲಿಸಿಟಿ ಯಶ್ವಿನ್ ಕೆ ಶೆಟ್ಟಿಗಾರ್ ಇವರು ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ರಂಜನ್, ವೆನ್ಯ ರೈ, ಜ್ಯೋತಿಶ್ ಶೆಟ್ಟಿ, ಸುನಿಲ್ ನೆಲ್ಲಿಗುಡ್ಡೆ, ಅನಿಲ್ ರಾಜ್ ಉಪ್ಪಳ, ಚೇತನ್ ರೈ ಮಾಣಿ, ರವಿ ರಾಮಕುಂಜ, ಸುರೇಶ್ ಮಂಜೇಶ್ವರ, ಪ್ರಭಾಕರ್ ಕಾಸರಗೋಡು , ತೇಜಸ್ವಿನಿ ಕಿಶೋರ್, ಸಂದೀಪ್ ಭಕ್ತ ಆಶಾ ಮಾರ್ನಾಡ್, ನಯನ ಸಾಲ್ಯಾನ್, ದೀಕ್ಷಾ ಭಾಗ್ಯರಾಜ್ ನಾವೂರು, ವಿನೋದ್ ಶೆಟ್ಟಿ, ಸಂಕೇತ್, ಉತ್ಸವ್ ವಾಮಂಜೂರ್, ತುಳಸಿಧರನ್, ಶಶಿ ಗುಜರನ್ ಪಡುಬಿದ್ರಿ, ಉದಯ್ ಶೆಟ್ಟಿ ಇಡ್ಯಾ ಮೊದಲಾದವರಿದ್ದಾರೆ.
ಕಥಾ ಸಾರಾಂಶ: ಊರಿನ ದುರ್ಗಾಪರಮೇಶ್ವರಿ ದೇವರು ಉತ್ಸವ ಮುಗಿಸಿ ಜಳಕಕ್ಕಾಗಿ ನದಿ ದಂಡೆಯಲ್ಲಿರುವ ಪಕ್ಕದ ಊರಿಗೆ ಬರುವುದು ವಾಡಿಕೆ. ಆರಾಟಕ್ಕೆ ಬರುವ ದಾರಿಯಲ್ಲಿ ಕಟ್ಟೆಯಲ್ಲಿ ಪೂಜೆ ಆಗಿಯೇ ದೇವರು ಜಳಕವನ್ನಾಡುವರು.
ಕಾಲಕ್ರಮೇಣ ಕಟ್ಟೆಯು ನಿರ್ಲಕ್ಷ್ಯಕ್ಕೊಳಗಾಗಿ ಕಟ್ಟೆಯ ಯಜಮಾನಿಕೆಯ ಮನೆತನಕ್ಕೆ ಬರುವ ನ್ಯಾಯ ಏನು, ಬೇಜವಾಬ್ದಾರಿ ತಂದೆಯ ಮನೆಯಲ್ಲಿ ಆಗುವ ಅನಾಹುತಗಳೇನು ಪ್ರಾಮಾಣಿಕವಾಗಿ ದೇವರನ್ನು ನಂಬಿದರೆ ನಮ್ಮ ಕಷ್ಟ ಕಾಲಕ್ಕೆ ದೇವರು ಯಾವ ರೀತಿ ಸಹಾಯ ಮಾಡುತ್ತಾರೆ ಇದೆಲ್ಲದಕ್ಕೂ ಉತ್ತರವನ್ನು “ಆರಾಟ” ಸಿನಿಮಾದಲ್ಲಿ ನೋಡಬಹುದು.