ಪ್ರಧಾನಿಯವರಿಂದ ಅತ್ಯುತ್ತಮ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ಸ್ವೀಕರಿಸಿದ ಕಾರ್ಕಳದ ಅಯ್ಯೋ ಶ್ರದ್ಧಾ
ಹೊಸದಿಲ್ಲಿ: ಸಾಮಾಜಿಕ ತಾಣದಲ್ಲಿ ಜನಪ್ರಿಯವಾಗಿರುವ ಶ್ರದ್ಧಾ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅತ್ಯುತ್ತಮ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಭಾರತ್ ಮಂಟಪ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 20 ವಿಭಾಗಗಳಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮಹಿಳಾ ವಿಭಾಗದಲ್ಲಿ ‘ಅತ್ಯುತ್ತಮ ಸೃಜನಶೀಲ ಸೃಷ್ಟಿಕರ್ತ’ ಪ್ರಶಸ್ತಿ ಶ್ರದ್ಧಾ ಸ್ವೀಕರಿಸಿದರು. ಕಾರ್ಕಳ ಮೂಲದ ಶ್ರದ್ಧಾ ಜೈನ್ ಅವರು ‘ಅಯ್ಯೋ ಶ್ರದ್ಧಾ’ ಎಂದು ಜನಪ್ರಿಯರಾಗಿದ್ದಾರೆ. ಕನ್ನಡ, ತುಳು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ನೂರಾರು ರಂಜನೀಯ ಸಾಮಾನ್ಯ ಪಾತ್ರಗಳು ಆಡುಮಾತಿನ ಭಾಷೆಯನ್ನು ಬಳಸಿ ಸನ್ನಿವೇಶಗಳ ಚಿತ್ರಣ ತಮಾಷೆ ಮತ್ತು ಮನರಂಜನೆ ನೀಡುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ.ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಅರಳು ಹುರಿದಂತೆ ಮಾತನಾಡಿದ ಶ್ರದ್ದಾ ”ಎಷ್ಟೇ ಒತ್ತಡವಿದ್ದರೂ ನಾವು ಭಾರತೀಯರು ನಗುವ ಮಾರ್ಗ ಕಂಡುಕೊಳ್ಳುತ್ತಲೇ ಇದ್ದೇವೆ’ ಎಂದರು.
ಅತ್ಯುತ್ತಮ ಕಥೆಗಾರ, ಅತ್ಯಂತ ಪ್ರಭಾವಶಾಲಿ ಕೃಷಿ ಸೃಷ್ಟಿಕರ್ತ, ಸಾಂಸ್ಕೃತಿಕ ರಾಯಭಾರಿ, ಅತ್ಯುತ್ತಮ ಪ್ರಯಾಣ ಸೃಷ್ಟಿಕರ್ತ, ಸ್ವಚ್ಛತಾ ರಾಯಭಾರಿ, ನವ ಭಾರತ ಚಾಂಪಿಯನ್, ಟೆಕ್ ಸೃಷ್ಟಿಕರ್ತ, ಹೆರಿಟೇಜ್ ಫ್ಯಾಶನ್, ಆಹಾರ ವಿಭಾಗ, ಶಿಕ್ಷಣದಲ್ಲಿ ಮತ್ತು ಅಂತಾರಾಷ್ಟ್ರೀಯ ರಚನೆಕಾರ ಪ್ರಶಸ್ತಿಗಳನ್ನೂ ನೀಡಲಾಯಿತು.ಪ್ರೇರಣಾದಾಯಕ ಭಾಷಣಕಾರ್ತಿ ಜಯ ಕಿಶೋರಿ, ಅಮೇರಿಕನ್ ಯೂಟ್ಯೂಬರ್ ಡ್ರೂ ಹಿಕ್ಸ್ ಮತ್ತು ಇತರರು ಪ್ರಶಸ್ತಿ ಸ್ವೀಕರಿಸಿದರು. ಮೈಥಿಲಿ ಠಾಕೂರ್ ಅವರಿಗೆ ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.