ಅಡುಗೆ ಅನಿಲ ಬೆಲೆಯಲ್ಲಿ 100 ರೂ. ಕಡಿತ: ಪ್ರಧಾನಿ ಘೋಷಣೆ
ಹೊಸದಿಲ್ಲಿ, ಮಾ.8: ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 100 ರೂ. ಕಡಿತ ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಕಟಿಸಿದ್ದಾರೆ.
ಈ ಕುರಿತು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಇಂದು ಮಹಿಳಾ ದಿನಾಚರಣೆಯಾಗಿದ್ದು, ನಮ್ಮ ಸರಕಾರವು ಅಡುಗೆ ಅನಿಲ ಬೆಲೆಯಲ್ಲಿ ರೂ.100 ಕಡಿತಗೊಳಿಸಲು ತೀರ್ಮಾನಿಸಿದೆ. ಇದರಿಂದ ದೇಶಾದ್ಯಂತ ಇರುವ ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಲಿದೆ, ವಿಶೇಷವಾಗಿ ಮಹಿಳಾ ಶಕ್ತಿಯ ಹೊರೆಯನ್ನು” ಎಂದು ಬರೆದುಕೊಂಡಿದ್ದಾರೆ.
ಅಡುಗೆ ಅನಿಲವನ್ನು ಅಗ್ಗವಾಗಿ ದೊರೆಯುವಂತೆ ಮಾಡುವ ಮೂಲಕ, ಕುಟುಂಬಗಳ ಒಳಿತಿಗೆ ನೆರವಾಗುವ ಗುರಿ ಹೊಂದಿದ್ದೇವೆ ಹಾಗೂ ಆರೋಗ್ಯಕರ ಪರಿಸರವನ್ನು ಖಾತರಿಪಡಿಸಲು ಮುಂದಾಗಿದ್ದೇವೆ” ಎಂದೂ ಪ್ರಧಾನಿ ಹೇಳಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಉಜ್ವಲ ಯೋಜನೆಯಡಿ ನೀಡಲಾಗುತ್ತಿರುವ ರೂ. 300 ಸಬ್ಸಿಡಿ ಯೋಜನೆ ಯನ್ನು ಎಪ್ರಿಲ್ 1ರಿಂದ ಪ್ರಾರಂಭವಾಗಲಿರುವ ಆರ್ಥಿಕ ವರ್ಷದ ನಂತರವೂ ಮುಂದುವರಿಸುವುದಾಗಿ ಸರಕಾರ ಪ್ರಕಟಿಸಿತ್ತು.