ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 94ನೇ ಸ್ಥಾನ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ‌ ವಾಗ್ದಾಳಿ

ನವದೆಹಲಿ: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನ ಪಡೆದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಅಭಿಪ್ರಾಯ ಹಂಚಿಕೊಂಡಿರುವ ರಾಹುಲ್ ಗಾಂಧಿ, ಸರ್ಕಾರ ತಮ್ಮ ಕೆಲ ‘ವಿಶೇಷ’ ಸ್ನೇಹಿತರ ಜೇಬು ತುಂಬಿಸುವಲ್ಲಿ ನಿರತವಾಗಿರುವುದರಿಂದ ದೇಶದ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 94 ನೇ ಸ್ಥಾನದಲ್ಲಿದೆ, ಪಾಕಿಸ್ತಾನ(88) ಮತ್ತು ಬಾಂಗ್ಲಾದೇಶ (75) ಗಿಂತಲೂ ಕೆಳಗಿರುವ ಗ್ರಾಫಿಕ್ಸ್ ಅನ್ನು ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದರ ಪ್ರಕಾರ ಕೇವಲ 13 ದೇಶಗಳು ಮಾತ್ರ ಭಾರತದಿಂದ ಕೆಳಗಿವೆ. ಇದು ರವಾಂಡ, ನೈಜೀರಿಯಾ, ಅಫ್ಗಾನಿಸ್ತಾನ ಮತ್ತು ಲಿಬಿಯಾಗಳನ್ನು ಒಳಗೊಂಡಿವೆ.

ಕಳೆದ ವರ್ಷ 102ರಷ್ಟಿದ್ದ ಶ್ರೇಣಿ ಈ ವರ್ಷ 94ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆಯನ್ನು ಲೆಕ್ಕಹಾಕುವ ಸೂಚ್ಯಂಕವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

107 ದೇಶಗಳ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಮೊತ್ತ 27.2 ಆಗಿದೆ. ಇದು ಭಾರತವನ್ನು ಗಂಭೀರ ವಿಭಾಗದಲ್ಲಿರಿಸುತ್ತದೆ. ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ.14ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!