ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಪ್ರದಾನ
ಉಡುಪಿ, ಮಾ.5: ಯುವವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್ನ ಲಕ್ಷ್ಮೀ ಸಭಾಭವನದಲ್ಲಿ ರವಿವಾರ ಜರಗಿತು.
ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಅವರಿಗೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಯನ್ನು ಹಿರಿಯ ಬೈದೇರುಗಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡ ಅವರಿಗೆ ಪ್ರದಾನಿಸಲಾಯಿತು. ಸಮಾಜಸೇವಕ ಈಶ್ವರ ಮಲ್ಪೆ ಅವರ ಪರವಾಗಿ ಅವರ ಪತ್ನಿ ಗೀತಾ ಅವರಿಗೆ ಸಮ್ಮಾನಿಸಲಾಯಿತು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ಅಮಿತಾಂಜಲಿ ಕಿರಣ್ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಸ್ವೀಕರಿಸಿದ ಕನರಾಡಿ ವಾದಿರಾಜ ಭಟ್ ಮಾತನಾಡಿ, ನಾರಾಯಣಗುರುಗಳು ಜ್ಞಾನಜ್ಯೋತಿ ಬೆಳಗಿದವರು. ಕೋಟಿ ಚೆನ್ನಯರು ಸತ್ಯ, ಧರ್ಮ, ನ್ಯಾಯದ ಮೂಲಕ
ವೀರ ಪುರುಷರಾಗಿದ್ದರು. ಎಲ್ಲಾ ದೇಶದ ಮಹಾಕಾವ್ಯ ಗಳಲ್ಲಿ ಇಂತಹ ವೀರ ನಾಯಕರು ಕಾಣಸಿಗುತ್ತಾರೆ. ತುಳುನಾಡಿನ ಅಂತಹ ನಾಯಕರು ಕೋಟಿ ಚೆನ್ನಯರು. ಸತ್ಯ, ಧರ್ಮ, ನ್ಯಾಯಕ್ಕಾಗಿ ಹುಟ್ಟಿ ತಮ್ಮನ್ನು ತಾವು ತ್ಯಾಗ ಮಾಡಿದವರು. ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿಯಾಗಿದೆ. ಇವತ್ತಿನ ಕಾಲಘಟ್ಟದಲ್ಲಿ ಯುವಕರ ಸಂಘಟನೆ, ಪ್ರಚಾರಕಾರ್ಯಗಳು ಸಮಾಜಕ್ಕೆ ಮಾದರಿಯಾಗಬೇಕು. ಹಿರಿಯರ ಜತೆ ಯುವಸಮುದಾಯ, ಯುವ ಸಮುದಾಯದೊಂದಿಗೆ ಮಕ್ಕಳು ಇಂತಹ ಕಾರ್ಯಕ್ರಮಕ್ಕೆ ಬಂದರೆ ಸಮಾಜ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿದೆ ಎಂದರು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಮುಕ್ಕ ಶ್ರೀನಿವಾಸ ಕಾಲೇಜಿನ ಪ್ರೊ| ಎಂ.ಎಸ್.ಕೋಟ್ಯಾನ್ ಪ್ರಶಸ್ತಿ ಪ್ರದಾನಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಒಂದನೆ ಉಪಾಧ್ಯಕ್ಷ ಲೋಕೇಶ್ ಕೋಟ್ಯಾನ್ ಕುಳೂರು, ನಿವೃತ್ತ ಪ್ರಾಂಶುಪಾಲ ಡಾ| ಗಣನಾಥ ಎಕ್ಕಾರು ಉಪಸ್ಥಿತರಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದರು. ಸಂಚಾಲಕ ಭಾಸ್ಕರ ಸುವರ್ಣ ಸ್ವಾಗತಿಸಿದರು.ಅಶೋಕ್ ಕೋಟ್ಯಾನ್, ಸುಜಾತ ಪ್ರವೀಣ್, ಮಹೇಶ್ ಮಲ್ಪೆ ಸನ್ಮಾನ ಪತ್ರ ವಾಚಿಸಿದರು.
ಯುವವಾಹಿನಿಯ ಸಂಘಟನಾ ಕಾರ್ಯದರ್ಶಿ ವಿನೋದ್ ಕುಮಾರ್ ಹಾಗೂ ಮಹಿಳಾ ಸಂಚಾಲಕಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಜೊತೆ ಕಾರ್ಯದರ್ಶಿ ಸಂಧ್ಯಾ ಅಶೋಕ್ ಕೋಟ್ಯಾನ್ ವಂದಿಸಿದರು.