ಉಡುಪಿ ಜಿಲ್ಲೆಯ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲು ಆಗ್ರಹಿಸಿ ಮಾ.2ರಂದು ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿ
ಉಡುಪಿ ಮಾ.1(ಉಡುಪಿ ಟೈಮ್ಸ್ ವರದಿ): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ನಿಸ್ವಾರ್ಥ ಕಾರ್ಯಕರ್ತರಿಂದ ಮಾ.2 ರಂದು ಮಧ್ಯಾಹ್ನ 3 ಗಂಟೆಗೆ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಉಡುಪಿ ಜಿಲ್ಲೆಯ ಸ್ಥಳೀಯ ಅಭ್ಯರ್ಥಿಯನ್ನೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುವ ಉದ್ದೇಶದಿಂದ ಈ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಮಲ್ಪೆಯ ಏಳೂರು ಮೊಗುವೀರ ಭವನದ ಪಾರ್ಕಿಂಗ್ ಏರಿಯಾದಿಂದ ಆರಂಭಗೊಳ್ಳುವ ಈ ರ್ಯಾಲಿ ಉಡುಪಿಯ ಬಿಜೆಪಿ ಕಚೇರಿಯವರೆಗೆ ನಡೆಯಲಿದೆ. ಈ ರ್ಯಾಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಕೂಡ ಭಾರೀ ವೈರಲ್ ಆಗಿದ್ದು, ಇದರ ಹಿಂದೆ ಇರುವ ನಿಸ್ವಾರ್ಥ ಕಾರ್ಯಕರ್ತರ ಹೆಸರು ಮಾತ್ರ ಬಹಿರಂಗವಾಗಿಲ್ಲ. ಆದರೆ ಇದರ ಹಿಂದೆ ಉಡುಪಿ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಉಮೇದ್ವಾರಿಕೆ ಬಯಸಿದ ಮುಖಂಡನ ಪಾತ್ರವೂ ಇದೆ ಎನ್ನುವುದು ಚರ್ಚೆಗೆ ಕಾರಣವಾಗಿದೆ.