ಅಕ್ಟೋಬರ್ ವೇಳೆಗೆ ಕೋವಿಡ್-19 ಗೆ ಬರಲಿದೆ ಲಸಿಕೆ?
ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಗೆ ಅಕ್ಟೋಬರ್ ವೇಳೆಗೆ ಲಸಿಕೆ ಬರಲಿದೆ! ಹೌದು, ಈ ಮಾಹಿತಿಯನ್ನು ಅಮೆರಿಕದ ಪ್ರತಿಷ್ಠಿದ ಫಾರ್ಮ ಸಂಸ್ಥೆ (ಔಷಧ ಸಂಸ್ಥೆ) ಫಿಜರ್ ನ ಸಿಇಒ ಆಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ.
ಅಮೆರಿಕ ಹಾಗೂ ಯುರೋಪ್ ಗಳಲ್ಲಿ ಫಿಜರ್ ಸಂಸ್ಥೆ ಕೊರೋನಾ ತಡೆಗಾಗಿ ತಯಾರಿಸಲಾಗಿರುವ ಔಷಧ ಬಿಎನ್ ಟಿ 162 ಲಸಿಕೆಗೆ ಕ್ಲಿನಿಕಲ್ ಟ್ರಯಲ್ ಗಳನ್ನು ಜರ್ಮನಿಯ mRNA ಸಂಸ್ಥೆ BioNTech ಸಹಯೋಗದಲ್ಲಿ ನಡೆಸುತ್ತಿದೆ. ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಾರ್ಮಾಸ್ಯುಟಿಕಲ್ (ಐಎಫ್ ಪಿಎಂಎ) ಆಯೋಜಿಸಿದ್ದ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಆಲ್ಬರ್ಟ್ ಬೌರ್ಲಾ ಈ ಹೇಳಿಕೆ ನೀಡಿದ್ದಾರೆ.
“ಎಲ್ಲವೂ ಅಂದುಕೊಂಡಂತೆಯೇ ಆದರೆ ಅಕ್ಟೋಬರ್ ಅಂತ್ಯದ ವೇಳೆಗೆ ಕೊರೋನಾ ವೈರಸ್ ಗೆ ಲಸಿಕೆ ಸಿದ್ಧವಾಗಿರುವುದನ್ನು ಅತ್ಯಂತ ವಿಶ್ವಾಸದಿಂದ ಘೋಷಿಸಬಹುದು” ಎಂದು ಅವರು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಸ್ಟ್ರಾಜೆನೆಕಾ ಸಿಇಒ ಪ್ಯಾಸ್ಕಲ್ ಸೊರಿಯೊಟ್, ಗ್ಲಾಕ್ಸೊ ಸ್ಮಿತ್‌ಕ್ಲೈನ್ ನ ಮುಖ್ಯಸ್ಥ ಎಮ್ಮಾ ವಾಲ್ಮ್ಸ್ಲೆ, ಜಾನ್ಸನ್ ಮತ್ತು ಜಾನ್ಸನ್ ಮುಖ್ಯ ವೈಜ್ಞಾನಿಕ ಅಧಿಕಾರಿ ಪಾಲ್ ಸ್ಟೋಫೆಲ್ಸ್ ಭಾಗಿಯಾಗಿದ್ದರು. ಈ ಎಲ್ಲಾ ಸಂಸ್ಥೆಗಳೂ ಕೊರೋನಾ ತಡೆಗೆ ತಮ್ಮ ಪಾಲುದಾರರೊಂದಿಗೆ ಲಸಿಕೆ ತಯಾರಿಯಲ್ಲಿ ತೊಡಗಿದ್ದಾರೆ.
ಕೋವಿಡ್-19 ತಡೆಗೆ ಈ ವರೆಗೂ ವಿಶ್ವಾದ್ಯಂತ 120 ಲಸಿಕೆಗಳನ್ನು ಪ್ರಯೋಗಕ್ಕೆ ಸಿದ್ಧಪಡಿಸಲಾಗುತ್ತಿದೆ. ಈ ಪೈಕಿ 10 ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಗಳಲ್ಲಿದ್ದು, 11೦ ಲಸಿಕೆಗಳು ವೈದ್ಯಕೀಯ ಮೌಲ್ಯಮಾಪನದ ಪೂರ್ವ ಹಂತದಲ್ಲಿದೆ.