ಬಾರ್ ಮಾಲೀಕನ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ 9 ವಿಶೇಷ ತಂಡ ರಚನೆ
ಬೆಂಗಳೂರು: ಭೂಗತ ಲೋಕದ ಜೊತೆ ನಂಟು ಹೊಂದಿದ್ದ ಬಾರ್ ಮಾಲೀಕ ಮನೀಶ್ ಶೆಟ್ಟಿ ಅಲಿಯಾಸ್ ಸರ್ವೋತ್ತಮ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ 9 ವಿಶೇಷ ತಂಡಗಳನ್ನು ರಚಿಸಲಾಗಿದೆ.
ಬ್ರಿಗೇಡ್ ರಸ್ತೆಯ ಆರ್ ಹೆಚ್ ಪಿ ರಸ್ತೆಯ ಡ್ಯೂಯಟ್ ಬಾರ್ ಮಾಲೀಕ ಮನೀಶ್ ಶೆಟ್ಟಿಯನ್ನು ನಿನ್ನೆ ರಾತ್ರಿ ಬಾರ್ ಮುಂದೆ ನಿಂತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಸುಳಿವು ಪತ್ತೆ ಹಚ್ಚಿ ಬಂಧನ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪ ಮೂಲದ ಮನೀಶ್ ಶೆಟ್ಟಿ ಭೂಗತ ಪಾತಕಿಗಳಾದ ಬನ್ನಂಜೆ ರಾಜ, ರವಿ ಪೂಜಾರಿ, ದಾವೂದ್ ಸಹಚರರೊಂದಿಗೆ ಸಂಪರ್ಕ ಹೊಂದಿದ್ದು ಅವರ ಗ್ಯಾಂಗ್ ಗಳ ನಡುವಿನ ದ್ವೇಷಕ್ಕೆ ಮನೀಶ್ ಶೆಟ್ಟಿಯನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಅವರು ತಿಳಿಸಿದ್ದಾರೆ.
ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿರುವ ಮನೀಶ್ ಶೆಟ್ಟಿ ಹಲವರ ದ್ವೇಷ ಕಟ್ಟಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ.ಘಟನಾ ಸ್ಥಳದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುತ್ತಲಿನ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದು ಹಂತಕರಿಗೆ ಶೋಧ ಕೈಗೊಂಡಿದ್ದಾರೆ.