ಮಲ್ಪೆ: ಸಮುದ್ರ ಮಧ್ಯೆ ಮೀನುಗಾರರು ಸಹಿತ ಬೋಟು ಅಪಹರಿಸಿದ ದುಷ್ಕರ್ಮಿಗಳ ತಂಡ
ಮಲ್ಪೆ: ಸಮುದ್ರ ಮಧ್ಯೆ ಮೀನುಗಾರರು ಸಹಿತ ಬೋಟನ್ನು 25 ಮಂದಿಯ ತಂಡ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಡಿಸೇಲ್ ಲೂಟಿ ಮಾಡಿರುವ ಘಟನೆ ಫೆ.27ರಂದು ನಡೆದಿದೆ.
ಮಲ್ಪೆಯ ಚೇತನ್ ಸಾಲಿಯಾನ್ ಎಂಬವರ ಕೃಷ್ಣನಂದನ ಎಂಬ ಲೈಲಾನ್ ಬೋಟ್ನಲ್ಲಿ ಫೆ.19 ರಂದು ಆಳ ಸಮುದ್ರಕ್ಕೆ ಮೀನುಗಾರಿಕೆಗಾಗಿ ನಾಗರಾಜ್ ಹರಿಕಾಂತ, ನಾಗರಾಜ್ ಎಚ್.ಹರಿಕಾಂತ, ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮುಟ, ಕಾರ್ತಿಕ್ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಮಣ್ಯ ಖಾರ್ವಿ ಎಂಬವರು ತೆರಳಿದ್ದರು.
ಫೆ.27ರಂದು ಮೀನುಗಾರಿಕೆ ಮುಗಿಸಿ ಲಕ್ಷಾಂತರ ರೂ. ಮೌಲ್ಯದ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿರುವಾಗ ಬೋಟ್ನ ಬಲೆ ಫ್ಯಾನ್ಗೆ ಬಿದ್ದು ಬೋಟ್ ಬಂದ್ ಆಗಿ ನಿಂತಿತ್ತೆನ್ನಲಾಗಿದೆ. ಈ ವೇಳೆ ಸುಮಾರು 25 ಜನ ಮಂದಿ ಅಕ್ರಮಣ ಮಾಡಿ ಬೋಟ್ನ್ನು ತೀರಕ್ಕೆ ಎಳೆದುಕೊಂಡು ಹೋಗಿ ಮೀನುಗಾರರನ್ನು ಅಪಹರಿಸಿ ಬೋಟ್ನಲ್ಲಿದ್ದ ಸುಮಾರು 8 ಲಕ್ಷ ಮೌಲ್ಯದ ಮೀನು ಮತ್ತು ಬೋಟ್ಗೆ ತುಂಬಿಸಿದ 5,76,700ರೂ. ಮೌಲ್ಯದ 7,500 ಲೀಟರ್ ಡೀಸೆಲ್ ದೋಚಿರುವುದಾಗಿ ದೂರಲಾಗಿದೆ.
ಅಲ್ಲದೇ ಬೋಟ್ನಲ್ಲಿದ್ದ ಏಳು ಮಂದಿಯನ್ನು ಒತ್ತೆಯಾಳಾಗಿ ಇರಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಭಟ್ಕಳಕ್ಕೆ ತೆರಳಿರುವ ಮಲ್ಪೆ ಪೊಲೀಸರು, ಅಪಹರಿಸಲ್ಪಟ್ಟ ಬೋಟು ಮತ್ತು ಮೀನುಗಾರರನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.