ಸುರತ್ಕಲ್: ಶಾಲೆಯಿಂದ ನಾಪತ್ತೆಯಾಗಿದ್ದ ನಾಲ್ವರು SSLC ವಿದ್ಯಾರ್ಥಿಗಳು ಶವವಾಗಿ ಪತ್ತೆ
ಮಂಗಳೂರು: ಎಸ್ಎಸ್ಎಲ್ಸಿ ಪೂರ್ವ ಸಿದ್ದತಾ ಪರೀಕ್ಷೆ ಬರೆದು ಶಾಲೆಯಿಂದ ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಘಟನೆ ಸುರತ್ಕಲ್ನಲ್ಲಿ ನಡೆದಿದೆ.
ಸುರತ್ಕಲ್ನ ವಿದ್ಯಾದಾಯಿನಿ ಶಾಲೆಯ ವಿದ್ಯಾರ್ಥಿಗಳ ಶವ ಇದೀಗ ಹಳೆಯಂಗಡಿಯ ನದಿಯ ಬಳಿಯಲ್ಲಿ ಪತ್ತೆಯಾಗಿದೆ.
ಮೃತ ಮಕ್ಕಳನ್ನು ಯಶ್ಚಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ್ ಅವರ ಪುತ್ರ ರಾಘವೇಂದ್ರ(15), ವಿಶ್ವನಾಥ್ ಅವರ ಪುತ್ರ ನಿರೂಪ(15), ದೇವದಾಸ್ ಅವರ ಮಗ ಅನ್ವಿತ್(15) ಎಂದು ಗುರುತಿಸಲಾಗಿದೆ. ನಾಲ್ವರು ವಿದ್ಯಾರ್ಥಿಗಳು ಕೂಡ ಸುರತ್ಕಲ್ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಪೂರ್ವ ಸಿದ್ದತಾ ಪರೀಕ್ಷೆ ನಡೆದ ನಂತರದಲ್ಲಿ ನಾಲ್ವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು.
ಈ ಕುರಿತು ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೋಷಕರು ಹಾಗೂ ಪೊಲೀಸರು ಎಲ್ಲೆಡೆಯಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೆ ರಾತ್ರಿಯ ವೇಳೆಯಲ್ಲಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಸಮೀಪದಲ್ಲಿನ ರೈಲ್ವೆ ಸೇತುವೆಯ ಕೆಳಭಾಗದ ನದಿಯ ಬಳಿಯಲ್ಲಿ ಮಕ್ಕಳ ಶಾಲೆಯ ಬ್ಯಾಗ್, ಯೂನಿಫಾರ್ಮ್ ಪತ್ತೆಯಾಗಿತ್ತು.
ನಂತರ ನದಿಯಲ್ಲಿ ಹುಡುಕಾಟ ನಡೆಸಲಾಗಿದ್ದು, ನದಿಯಲ್ಲಿ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ. ನಾಲ್ವರು ವಿದ್ಯಾರ್ಥಿಗಳ ಮೃತದೇಹವನ್ನು ನದಿಯಿಂದ ಹೊರಗೆ ತೆಗೆಯಲಾಗಿದ್ದು, ಮಂಗಳೂರು ನಗರದ ವೆನ್ಲಾಕ್ ಆಸ್ಪತ್ತೆಯಲ್ಲಿ ಮರಣೋತ್ತರ ಕಾರ್ಯವನ್ನು ನಡೆಸಲಾಗಿದೆ.