‘ಗೋಬ್ಯಾಕ್ ಶೋಭಾ’ ಅಭಿಯಾನಕ್ಕೆ ಹೈಕಮಾಂಡ್ ಸರಿಯಾದ ಉತ್ತರ ಕೊಡಲಿದೆ- ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ಗಂಡಸರಲ್ಲಿ ಒಂದು ಮನಸ್ಥಿತಿ ಇದೆ. ಅಧಿಕಾರ ತಮ್ಮಲ್ಲೆ ಇರಬೇಕು ಎಂದು ದುಡ್ಡಿನ ದರ್ಪದಿಂದ, ಅಹಂಕಾರದಿಂದ ʼಗೋಬ್ಯಾಕ್ ಶೋಭಾʼ ಅಭಿಯಾನ ಮಾಡಿಸಿದ್ದಾರೆ. ಕಳೆದ ಚುನಾವಣೆಯ ಲ್ಲೂ ಮಾಡಿಸಿದ್ದರು. ಇದಕ್ಕೆ ಹೈಕಮಾಂಡ್ ಸರಿಯಾದ ಉತ್ತರ ಕೊಡಲಿದೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಕೃಷಿ ಮತ್ತು ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ವಿರುದ್ದ ಕಳೆದ ಚುನಾವಣೆಯಲ್ಲಿ ಗೋಬ್ಯಾಕ್ ಮಾಡಿದ್ದರು. ಈ ಚುನಾವಣೆಯಲ್ಲೂ ಮಾಡಿದ್ದಾರೆ. ವ್ಯವಸ್ಥಿತವಾಗಿ ಮಾಡಿದ್ದಾರೆ. ಮಾಡಿಸುತ್ತಿದ್ದಾರೆ. ಹೈಕಮಾಂಡ್ ನನಗೆ ಯಾವ ಜವಾಬ್ದಾರಿ ನೀಡಿದೆ ಪ್ರಾಮಾಣಿಕವಾಗಿ, ಕಪ್ಪು ಚುಕ್ಕೆ ಬಾರದಂತೆ ರಾಜಕೀಯ ಮಾಡಿದ್ದೇನೆ. ಯಾರು ಷಡ್ಯಂತ್ರ ಮಾಡಿದರು. ಉತ್ತರ ನಾನು ಕೊಡಲ್ಲ ಹೈಕಮಾಂಡ್, ಹಿರಿಯರು ಕೊಡುತ್ತಾರೆ” ಎಂದು ಆಕ್ರೋಶ ಹೊರ ಹಾಕಿದರು.
ಪತ್ರ ಯಾರು ಬರೆದರು, ಯಾರು ಪೋಸ್ಟ್ ಮಾಡಿದರು, ಎಷ್ಟು ಪೋಸ್ಟ್ ಮಾಡಿದರು. ಇದೆಲ್ಲದರ ಬಗ್ಗೆ ಕೇಂದ್ರ ಕೂಡ ವರದಿ ತರಿಸಿಕೊಂಡಿದೆ. ಸತ್ಯ ಕೇಂದ್ರದವರಿಗೆ ತಿಳಿದಿದೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿದೆ. ಅವರ ಎಂಎಲ್ಎಗಳನ್ನು ಉಳಿಸಿಕೊಳ್ಳಲು ಆಗಲ್ಲ ಎಂದು ಬಿಜೆಪಿ ಎಂಎಲ್ಎಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಆದ ಮೇಲೆ ಎಲ್ಲವೂ ಆಚೆ ಬರುತ್ತದೆ. ಕಾಂಗ್ರೆಸ್ ಆಂತರಿಕ ರಾಜಕೀಯದ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡುವೆ ಏನು ನಡೆಯುತ್ತಿದೆ ಎಂದು ಚುನಾವಣೆ ಬಳಿಕ ಆಚೆಗೆ ಬರುತ್ತದೆ ಎಂದರು.