ಹೊಸ ಕ್ರಿಮಿನಲ್ ಕಾನೂನುಗಳು ಜು.1 ರಿಂದ ಜಾರಿಗೆ ಬರಲಿವೆ: ಕೇಂದ್ರ ಸರಕಾರ
ಹೊಸದಿಲ್ಲಿ: ಇಂಡಿಯನ್ ಪೀನಲ್ ಕೋಡ್ ಅಥವಾ ಭಾರತೀಯ ದಂಡ ಸಂಹಿತೆಯ ಸ್ಥಾನವನ್ನು ತುಂಬಲಿರುವ ಹೊಸ ಕ್ರಿಮಿನಲ್ ಕಾಯಿದೆಗಳು ಈ ವರ್ಷದ ಜುಲೈ 1, 2024 ರಂದು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಇಂದು ಘೋಷಿಸಿದೆ.
ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷ್ಯ ಮಸೂದೆಗಳು ಇಂಡಿಯನ್ ಪೀನಲ್ ಕೋಡ್ 1860, ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ 1973 ಮತ್ತು ಭಾರತೀಯ ಪುರಾವೆ ಕಾಯ್ದೆ 1872 ಇವುಗಳ ಸ್ಥಾನದಲ್ಲಿ ಜಾರಿಗೆ ಬರಲಿವೆ.
ಈ ಮೂರೂ ಕಾನೂನುಗಳಿಗೆ ಸಂಸತ್ತು ಅನುಮೋದನೆ ನೀಡಿದೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಂಕಿತ ಕಳೆದ ಡಿಸೆಂಬರ್ನಲ್ಲಿ ಅವುಗಳಿಗೆ ದೊರಕಿತ್ತು.
ಈ ಹೊಸ ಕಾನೂನುಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಮಹತ್ವ ನೀಡಲಿವೆ ಎಂದು ಅವುಗಳನ್ನು ಕಳೆದ ವರ್ಷ ಸಂಸತ್ತಿನಲ್ಲಿ ಮಂಡಿಸುವ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.