ಸಿದ್ದರಾಮಯ್ಯ ಸರಕಾರದಲ್ಲಿ ರಾಮ ಭಕ್ತರಿಗೆ ರಕ್ಷಣೆ ಇಲ್ಲ: ಯಶ್ಪಾಲ್ ಸುವರ್ಣ
ಉಡುಪಿ: ಅಯೋಧ್ಯೆ ಶ್ರೀ ರಾಮ ಮಂದಿರದ ದರ್ಶನ ಪಡೆದು ರಾಮ ಭಕ್ತರು ವಾಪಸಾಗುತ್ತಿದ್ದ ಅಯೋಧ್ಯೆ ಧಾಮ ರೈಲಿಗೆ ಹೊಸಪೇಟೆಯಲ್ಲಿ ಮತಾಂಧ ಶಕ್ತಿಗಳು ಗೋಧ್ರಾ ಮಾದರಿಯಲ್ಲಿ ಬೆಂಕಿ ಹಚ್ಚುವ ಬೆದರಿಕೆ ಹಾಕಿದ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದ್ದು, ಸಿದ್ದರಾಮಯ್ಯ ಸರಕಾರದಲ್ಲಿ ರಾಮ ಭಕ್ತರಿಗೆ ರಕ್ಷಣೆ ಇಲ್ಲ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣದ ಫಲವಾಗಿ ಮತಾಂಧ ಶಕ್ತಿಗಳು ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕಲು ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದೆ. ಬಹುಸಂಖ್ಯಾತ ಹಿಂದೂಗಳಿಗೆ ಈ ಸರ್ಕಾರದಲ್ಲಿ ರಕ್ಷಣೆಯಿಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ಈ ಹಿಂದೆ ಗೋಧ್ರಾ ಮಾದರಿಯ ಘಟನೆಗಳು ರಾಜ್ಯದಲ್ಲಿ ನಡೆಯುವ ಬಗ್ಗೆ ಹೇಳಿಕೆ ನೀಡುವ ಮೂಲಕ ಪರೋಕ್ಷವಾಗಿ ಪ್ರೇರಣೆ ನೀಡಿದ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ರನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು.
ರಾಜ್ಯ ಸರ್ಕಾರದ ಮೇಲೆ ಜನತೆಗೆ ಕಾನೂನು ಸುವ್ಯವಸ್ಥೆಯ ನಿಟ್ಟಿನಲ್ಲಿ ಯಾವುದೇ ಭರವಸೆ ಉಳಿದಿಲ್ಲ, ಕೇಂದ್ರ ಸರ್ಕಾರ ತಕ್ಷಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಎನ್ಐಎ ತನಿಖೆಗೆ ಹಸ್ತಾಂತರಿಸಿ ಕೃತ್ಯದ ಹಿಂದಿನ ಜಾಲವನ್ನು ಬಯಲಿಗೆಳೆದು ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.