ಕನ್ನಡಿಗರು ಇಷ್ಟವಿಲ್ಲವಾ? ಅಥವಾ ಯಡಿಯೂರಪ್ಪನವರು ಇಷ್ಟವಿಲ್ಲವೇ?: ಮೋದಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಕಲಬುರಗಿ: ತಮಗೆ ಕನ್ನಡಿಗರು ಅಂದ್ರೆ ಇಷ್ಟ ಇಲ್ಲವಾ? ಅಥವಾ ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇಷ್ಟವಿಲ್ಲವಾ? ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ನೆರೆಪೀಡಿತ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಹಾರದ ಭರವಸೆ ನೀಡಿರುವುದಾಗಿ ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ. ಆದರೆ ಕರ್ನಾಟಕದ ಪ್ರವಾಹದ ಬಗ್ಗೆ ಯಾವುದೇ ಪ್ರಸ್ತಾಪ ಮಾಡದ ಪ್ರಧಾನಿ ಮೋದಿಯ ನಡೆಯನ್ನು ಖರ್ಗೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಭಾರೀ ಮಳೆ ಹಾಗೂ ಪ್ರವಾಹದಿಂದ ಕರ್ನಾಟಕ ರಾಜ್ಯ ಸಂಕಷ್ಟದಲ್ಲಿದೆ. ಆದರೂ, ನೀವು ಪ್ರತಿ ಬಾರಿ ತಾರತಮ್ಯ ನೀತಿ ಅನುಸರಿಸುತ್ತೀರಿ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಸಹಾಯ ಮಾಡುವ ನಿಮಗೆ ಕನ್ನಡಿಗರು ಹಾಗೂ ಯಡಿಯೂರಪ್ಪನವರು ಕಾಣಿಸುವುದಿಲ್ಲವೇ? ಎಂದು ಕುಟುಕಿದ್ದಾರೆ.