ಮಂದಾರ್ತಿ: ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ ಉದ್ಘಾಟನೆ
ಬ್ರಹ್ಮಾವರ: ’ಧರ್ಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ನೈತಿಕ ಬಲ ವೃದ್ಧಿಯಾಗುತ್ತದೆ’ ಎಂದು ಶೃಂಗೇರಿ ಮಠದ ಉಡುಪಿ ಪ್ರಾಂತೀಯ ಧರ್ಮದರ್ಶಿ ವಾಗೀಶ ಎಸ್. ಶಾಸ್ತ್ರಿ ಹೇಳಿದರು.
ಬಾರ್ಕೂರಿನ ಮಾಸ್ತಿ ಅಮ್ಮ ದೇವಸ್ಥಾನದ ಧರ್ಮಶಾಲೆಯ ವಠಾರದಲ್ಲಿ ಬಾರ್ಕೂರು ಮಂದಾರ್ತಿ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶೃಂಗೇರಿ ಮಠವು ದೇಶದ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರಗಳಲ್ಲಿ ಒಂದು. ಅಲ್ಲಿನ ಪೀಠಾಧಿಪತಿ ಭಾರತೀ ತೀರ್ಥ ಸ್ವಾಮೀಜಿ ಸಾಕ್ಷಾತ್ ಸರಸ್ವತಿ ಸ್ವರೂಪರಾಗಿರುವರು. ಶಂಕರಾಚಾರ್ಯರು ರಚಿಸಿದ ಅಷ್ಟೋತ್ತರ, ಸೌಂದರ್ಯ ಲಹರಿ ಕನಕಧಾರ ಸ್ತೋತ್ರ
ಗಳನ್ನು ಪಠಣ ಮಾಡಿ ಯುವಜನಾಂಗವೂ ಸತ್ಸಂಗಗಳಲ್ಲಿ ಭಾಗವಹಿಸಿ ಸತ್ಕರ್ಮಗಳನ್ನು ಮಾಡಬೇಕು’ ಎಂದರು.
ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಸ್ಥಾಪಕ ಅಧ್ಯಕ್ಷ ಮತ್ತು ಸಮಾಜದ ಹಿರಿಯ ಮಾರ್ಗದರ್ಶಿ ಸಿ.ಎಸ್.ರಾವ್ ಘಟಕವನ್ನು ವಾಗೀಶ ಎಸ್. ಶಾಸ್ತ್ರಿ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ರವೀಂದ್ರನಾಥ ರಾವ್ ಸಂಘಟನೆಯ ಮಹತ್ವವನ್ನು ವಿವರಿಸಿದರು. ಕುಂದಾಪುರ ತಾಲ್ಲೂಕು ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಕೃಷ್ಣ ಗೋಪಾಲ ಹೆಬ್ಬಾರ್, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಶಿ,
ಮಹಾಮಂಡಲದ ಉಪಾಧ್ಯಕ್ಷ ಡಾ.ಸುದರ್ಶನ್ ರಾವ್, ಮಾಸ್ತಿ ಅಮ್ಮ ದೇವಸ್ಥಾನ ಧರ್ಮಶಾಲೆಯ ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಡಾ.ರಾಘವೇಂದ್ರ ರಾವ್, ಕೋಟೆಕೇರಿ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಮಂಜುನಾಥ ರಾವ್ ಕೋಟೆಕೇರಿ, ಹಿರಿಯ ಪ್ರಶಸ್ತಿ ಪುರಸ್ಕೃತ ಕೃಷಿಕ ಶಂಭು ಶಂಕರ ರಾವ್ ಇದ್ದರು.ಸಂಘದ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಹಿರಿಯ ಕೃಷಿಕ ಬಾರ್ಕೂರು ರಮೇಶ್ ರಾವ್ ಮತ್ತು ಹಿರಿಯ ಪಾಕ ಪ್ರವೀಣ ಮೈರ್ಕೊಮೆ ಚಂದ್ರಶೇಖರ ರಾವ್ ಅವರನ್ನು ಸನ್ಮಾನಿಸಲಾಯಿತು. ಸ್ಥಾನಿಕ ಸಮಾಜದ ಇಪ್ಪತ್ತೈದು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.
ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ದೇವಾನಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತ ಪದ್ಮನಾಭ ಸ್ವಾಗತಿಸಿದರು. ಗಣೇಶ ರಾವ್ ಮಾಸ್ತಿಬೈಲ್ ವಂದಿಸಿದರು. ಸವಿತಾ ಎರ್ಮಾಳ್ ನಿರೂಪಿಸಿದರು.