ಕೊಂಕಣ್ ರೈಲ್ವೆಯ 30ನೇ ಸಂಸ್ಥಾಪನಾ ದಿನಾಚರಣೆ: ಕೋವಿಡ್ ಮಧ್ಯೆಯೂ ಗುಣಮಟ್ಟದ ಸೇವೆ
ಉಡುಪಿ: ಕೊಂಕಣ್ ರೈಲ್ವೆಯ 30ನೇ ಸಂಸ್ಥಾಪನ ದಿನಾಚರಣೆ ಗುರುವಾರ ಆನ್ಲೈನ್ ಮೂಲಕ ನಡೆಯಿತು. ರೈಲ್ವೆ ಬೋರ್ಡ್ನ ಸಿಇಒ ಹಾಗೂ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಮಾತನಾಡಿ, ‘ರೈಲು ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಹಾಗೂ ಮೂಲ ಸೌಕರ್ಯ ಒದಗಿಸುವಲ್ಲಿ ಕೊಂಕಣ್ ರೈಲ್ವೆ ಕಾರ್ಯ ಶ್ಲಾಘನೀಯ’ ಎಂದರು.
‘ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರ ಮಾರ್ಗದರ್ಶನದಂತೆ ಕೊಂಕಣ್ ರೈಲ್ವೆಯು ಪ್ರಯಾಣಿಕರ ಅಗತ್ಯತೆಗಳಿಗೆ ಸ್ಪಂದಿಸುತ್ತ, ಉತ್ತಮ ಸೇವೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಜನ್ ಅಂದೋಲನ್’ ಕರೆಗೆ ಕೈಜೋಡಿಸಿ ಕೋವಿಡ್ ಸೋಂಕು ಹರಡುವಿಕೆ ತಡೆಗೆ ನಿರಂತರವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ’ ಎಂದರು.
‘ನೇಪಾಳಕ್ಕೆ ಎರಡು ಡೆಮೊ ರೈಲುಗಳ ಹಸ್ತಾಂತರ ಹೆಮ್ಮೆಯ ವಿಚಾರ, ಕೋವಿಡ್ ಸಂದರ್ಭದಲ್ಲಿ ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣಕ್ಕೆ ಒತ್ತು ನೀಡಿದ ಪರಿಣಾಮ ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಆರ್ಥಿಕ ವರ್ಷದಲ್ಲಿ ಮುಕ್ತಾಯವಾಗುವ ವಿಶ್ವಾಸವಿದೆ. ಈ ಎಲ್ಲ ಕಾರ್ಯಕ್ಕೆ ಕೊಂಕಣ್ ರೈಲ್ವೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಶ್ರಮ ಕಾರಣ’ ಎಂದು ವಿನೋದ್ ಕುಮಾರ್ ಯಾದವ್ ಹೇಳಿದರು.