ಬೈಂದೂರು: ಕಾರಿನಲ್ಲೇ ವಿಷ ಸೇವಿಸಿ ಚಾಲಕ ಆತ್ಮಹತ್ಯೆ
ಬೈಂದೂರು: (ಉಡುಪಿ ಟೈಮ್ಸ್ ವರದಿ)ಮನೆಯಲ್ಲಿ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬಾಡಿಗೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಕಾರು ಚಾಲಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ನಾಗರಾಜ (23) ಪಡುವರಿ ಗ್ರಾಮದ ನಿವಾಸಿಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕಾರು ಚಾಲಕನಾಗಿ ದುಡಿಯುತ್ತಿದ್ದ, ಅ. 12ರಂದು ತಾಯಿಯಲ್ಲಿ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬಾಡಿಗೆ ಇದೆಂದು ಹೇಳಿ ಹೋಗಿದ್ದ.
ಅ. 14 ರಂದು ಬೆಳಿಗ್ಗೆ ತಾಯಿಗೆ ಕರೆ ಮಾಡಿ ತಾನು ಧರ್ಮಸ್ಥಳದಲ್ಲಿ ಇದ್ದೇನೆ ಸಂಜೆ ಬರುವುದಾಗಿ ತಿಳಿಸಿದ್ದ. ಆದರೆ ಗುರುವಾರ ಮಧ್ಯಾಹ್ನ ಮೃತನ ಸಹೋದರ ಮಣಿಕಂಠನಿಗೆ ಸ್ನೇಹಿತನೊರ್ವನಿಂದ ನಾಗರಾಜನು ಶಿರೂರು ಗ್ರಾಮದ ಸಾತನಗುಡ್ಡೆ ಎಂಬಲ್ಲಿ ಶಿರೂರು ತೂದಳ್ಳಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ವಿಷ ಸೇವಿಸಿ ಮೃತಪಟ್ಟಂತೆ ಕಂಡು ಬರುವುದಾಗಿ ತಿಳಿಸಿದ್ದ.
ನಾಗರಾಜ ಯಾವುದೋ ಕಾರಣಕ್ಕೆ ನೊಂದು ಕಾರಿನಲ್ಲಿ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಣಿಕಂಠ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.