ಕುಂದಾಪುರ: ಸೇನಾಪುರ ರೈಲು ನಿಲುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕುಂದಾಪುರ, ಫೆ 19: ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಎಕ್ಸ್ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಬೃಹತ್ ಧರಣಿ ನಡೆಯಿತು.
ಸೇನಾಪುರ ರೈಲ್ವೆ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಪೂರಕ ಅವಕಾಶಗಳಿವೆ. ಈ ಬಗ್ಗೆ ಇಲಾಖೆಯು ಜನರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸೇನಾಪುರದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆಯಾದರೆ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯ, 24 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಸೇನಾಪುರ ರೈಲು ನಿಲ್ದಾಣ ನಿರ್ಮಾಣವಾಗುವ ಸಂದರ್ಭ ಮೂರು ಟ್ರ್ಯಾಕ್ಗಳನ್ನು ಮಾಡಲಾಗಿದ್ದು, ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ. ಇದಕ್ಕಾಗಿ ಮೂರು ತಿಂಗಳ ಗಡುವು ನೀಡುತ್ತಿದ್ದು ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಅವಕಾಶ ನಿರಾಕರಿಸಿದರೆ 25 ಗ್ರಾಮಗಳನ್ನು ಒಳಗೊಂಡು ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಲಾಯಿತು.
ಪ್ರತಿಭಟನಾ ಸಭೆಗೂ ಮುನ್ನ ನಾಡ ಗ್ರಾಮ ಪಂಚಾಯಿತಿ ಬಳಿಯಿಂದ ಸೇನಾಪುರ ರೈಲು ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.