ಉಡುಪಿ ಶಾಸಕರ ಪತ್ರದಲ್ಲಿ ನಿಷೇಧಿತ ಪದ ಬಳಕೆ- ದಲಿತ ಸಂಘರ್ಷ ಸಮಿತಿ ಖಂಡನೆ
ಉಡುಪಿ: ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ತನ್ನ ಕಾಮಗಾರಿಗೆ ಸಂಬಂಧಿಸಿದ ಪತ್ರದಲ್ಲಿ ಫಲಾನುಭವಿಗಳ ಹೆಸರಿನ ಮುಂದೆ ನಿಷೇಧಿತ ಪದ ಬಳಸಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಖಂಡಿಸಿದ್ದಾರೆ.
ಉಡುಪಿ ನಗರ ಸಭಾ ವ್ಯಾಪ್ತಿಯ 4ನೇ ಕೊಡವೂರು ವಾರ್ಡ್ ನ ಲಕ್ಷ್ಮೀ ನಗರದ 4ನೇ ಅಡ್ಡ ರಸ್ತೆಯ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಶಾಸಕ ಯಶ್ಪಾಲ್ ಸುವರ್ಣ ತನ್ನ ಪತ್ರದಲ್ಲಿ ಫಲಾನುಭವಿಗಳ ಹೆಸರಿನ ಮುಂದೆ ನಿಷೇಧಿತ ಪದ ಬಳಸಿರುವುದು ಮಾತ್ರವಲ್ಲದೆ, ಹರಿಜನ ದೇವಸ್ಥಾನಕ್ಕೆ ಹೋಗುವ ದಾರಿ ಎಂದು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಕಾಲೊನಿಯ ರಸ್ತೆ ಮತ್ತು ಚರಂಡಿ ಮೊದಲಾದ ಮೂಲಭೂತ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಫಲಾನುಭವಿ ಗಳ ಹೆಸರಿನ ಮುಂದೆ ಉದ್ದೇಶಪೂರ್ವಕವಾಗಿ ಹರಿಜನ ಪದ ಬಳಸಲಾಗಿದೆ.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇದರ ಬಗ್ಗೆ ಪರಿಜ್ಞಾನವಿಲ್ಲದ ಶಾಸಕರು ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎನ್ನುತ್ತಲೇ ತನ್ನ ಗರ್ಭದಲ್ಲಿ ನಿಷೇಧಿತ ಪದ ಬಳಸಿರುವುದು ಸಂವಿಧಾನಕ್ಕೆ ಬಗೆದ ಅಪಚಾರ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.