ಸಹಕಾರಿ ಕ್ಷೇತ್ರದಲ್ಲಿ ಆಡಳಿತಾತ್ಮಕ ಬದಲಾವಣೆ ಮಾಡಿಕೊಳ್ಳುವುದು ಉತ್ತಮ- ಜಯಕರ್ ಶೆಟ್ಟಿ
ಉಡುಪಿ ಫೆ.16(ಉಡುಪಿ ಟೈಮ್ಸ್ ವರದಿ): ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಂಡಳ ಮೈಸೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಯವರಿಗೆ ಕಾರ್ಯದಕ್ಷತೆ ಕುರಿತು ರಾಜ್ಯ ಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮ ಇಂದು ಕಡಿಯಾಳಿಯ ಖಾಸಗಿ ಹೋಟೇಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಂಡಳ ಮೈಸೂರು ಇದರ ಅಧ್ಯಕ್ಷ ಹೆಚ್.ಜಿ. ಮಂಜಪ್ಪ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಎಲ್ಲಾ ಸಹಕಾರ ಸಂಘಗಳು ಆರ್ಥಿಕವಾಗಿ ಕುಂಟಿತಗೊಂಡಿದೆ. ಸರಕಾರದ ಅನುದಾನದ ಕೊರತೆಯಿದ್ದರೂ ಮಾರಾಟ ಮಳಿಗೆಯನ್ನು ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಈ ವ್ಯವಹಾರವನ್ನು ತಲುಪಿಸಿ ಅವರ ಜೀವನೋದ್ಧಾರವನ್ನು ಮಾಡಿದ್ದೇವೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ ಈ ನಿಟ್ಟಿನಲ್ಲಿ ಸರಕಾರ ಈ ಕ್ಷೇತ್ರದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು. ಉಪನಿಂಬಂನೆ ಗಳಿಗೆ, ಕಾಯ್ದೆ ಕಾನೂನು, ಸರಕಾರದ ಸುತ್ತೋಲೆಗಳಿಗೆ ಪೂರಕವಾಗಿ ಆಗುವ ಬದಲಾವಣೆಗಳಿಗೆ ಸರಿಸಮವಾಗಿ ವ್ಯವಹಾರವನ್ನು ಆಡಳಿತಾತ್ಮಕ ಬದಲಾವಣೆ ಮಾಡಿಕೊಳ್ಳುವುದು ನಮ್ಮ ಧರ್ಮ. ಇಲ್ಲಿನ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲಕಾಲಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಕಾನೂನಿನ ತಿಳುವಳಿಕೆ ಪಡೆದುಕೊಂಡು ಅದನ್ನು ವ್ಯವಹಾರದಲ್ಲಿ ಅನುಷ್ಟಾನ ಮಾಡುವ ಮುಖಾಂತರ ಬದಲಾವಣೆಯನ್ನು ಮಾಡಬೇಕಿದೆ ಎಂದರು.
ಹಾಗೂ ಸಹಕಾರಿ ಸಂಸ್ಥೆಗಳಿಗೆ ಜಿಎಸ್ಟಿ ತೆರಿಗೆ ಕಟ್ಟುವುದು ಕಷ್ಟವಲ್ಲ ಆದರೆ ಪರ್ಸಂಟೇಜ್ನಲ್ಲಿ ಕಡಿಮೆ ಮಾಡಬೇಕು. ಇದಕ್ಕಾಗಿ ಉಡುಪಿಯಲ್ಲಿ ಸಾಕಷ್ಟು ಹೋರಾಟಗಳು ನಡೆದರ ಫಲವಾಗಿ ಸ್ವಲ್ಪಮಟ್ಟಿಗೆ ರಿಯಾಯ್ತಿ ಸಿಕ್ಕಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಸಿಇಒ ಹಾಲಪ್ಪ ಕೋಡಿಹಳ್ಳಿ, ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾಮಂಡಳ(ಮೈಸೂರು) ನಿರ್ದೇಶಕ ಅಂಜು ಬಾಬು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಹರೀಶ್ ಕಿಣಿ ಅಲೆವೂರು, ಮಂಜಯ್ಯ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಮನೋಜ್ ಕರ್ಕೇರ, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ(ಬೆಂಗಳೂರು) ವ್ಯವಸ್ಥಾಪಕ ನಿರ್ದೇಶಕ ಡಾ. ಗುರುಸ್ವಾಮಿ ಉಪಸ್ಥಿತರಿದ್ದರು. ಶ್ರೀಧರ್ ನಿರೂಪಿಸಿ, ರಾಜ್ಯದ ವಿವಿಧ ಭಾಗಗಳಿಂದ ನೂರಾರರು ಸಹಕಾರಿಗಳು ಉಪಸ್ಥಿತರಿದ್ದರು.