ಕಾಪು ಪುರಸಭಾ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ: ಸೊರಕೆ

ಕಾಪು: ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡಬೇಕು ಎಂದು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ಹಾಗೂ ಕಾಪು ನಗರ ಕಾಂಗ್ರೆಸ್ ವತಿಯಿಂದ ಗುರುವಾರ ಇಲ್ಲಿ ಪ್ರತಿಭಟನೆ ನಡೆಯಿತು.

ರಾಜೀವ್ ಭವನದಿಂದ ಪುರಸಭೆವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, ಪುರಸಭೆ ಹಾಗೂ ಕಾಪು ಶಾಸಕರ ವಿರುದ್ಧ ಘೋಷಣೆ ಕೂಗಿದರು.

‘ಹಿಂದಿನ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಂಜೂರಾಗಿದ್ದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಲಾಗುತ್ತಿದೆ. ನೀರಿನ ತೆರಿಗೆ, ಮನೆ ಮತ್ತು ವಾಣಿಜ್ಯ ತೆರಿಗೆ, ಮೆಸ್ಕಾಂ ಬಿಲ್, ಪರವಾನಿಗೆ ಶುಲ್ಕ ಮತ್ತು ವಾಣಿಜ್ಯ ಕಟ್ಟಡ ತೆರಿಗೆಯನ್ನು  ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು ಇದನ್ನು ಕೂಡಲೇ ಸರಿಪಡಿಸಬೇಕೆಂದರು. ಕಾಪು ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದೇ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಸಾಧಿಕ್, ಕೆಪಿಸಿಸಿ ಮುಖಂಡ ಎಂ.ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಯುವ ಮುಖಂಡ ಅಜಿತ್ ಕುಮಾರ್ ಹಿರಿಯಡಕ ಮಾತನಾಡಿದರು. ಪ್ರತಿಭಟನಾ ಸಭೆಯ ಬಳಿಕ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ ಅವರ ಮೂಲಕ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಯು.ಸಿ. ಶೇಖಬ್ಬ, ಮೈಕಲ್ ರಮೇಶ್ ಡಿಸೋಜ, ರಾಜೇಶ್ ಶೆಟ್ಟಿ ಪಾಂಗಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಪ್ರಭಾ ಶೆಟ್ಟಿ, ಸೌಮ್ಯ ಎಸ್, ಮಾಲಿನಿ, ಕೆ.ಎಚ್. ಉಸ್ಮಾನ್, ವಿಜಯಲಕ್ಷ್ಮಿ ಕೋಟ್ಯಾನ್, ಅಶ್ವಿನಿ ನವೀನ್, ಸುಲೋಚನಾ ಬಂಗೇರ, ಶಾಬು ಸಾಹೇಬ್, ಶಾಂತಲತಾ ಶೆಟ್ಟಿ, ಅಬ್ದುಲ್ ಹಮೀದ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!