ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆ: ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಒತ್ತಾಯ
ಉಡುಪಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಜಿಲ್ಲಾ ಸಂಘದಿಂದ ಬುಧವಾರ ನಗರದ ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಸಂಘದ ಪಧಾದಿಕಾರಿಗಳ ಹಾಗೂ ಪ್ರತಿನಿಧಿಗಳ ಸಭೆ ನಡೆಯಿತು.
ಸಭೆಯಲ್ಲಿ ಪದವೀಧರ ಶಿಕ್ಷಕರಿಗೆ ಬಡ್ತಿ ನೀಡಲು ನಿಗದಿಪಡಿಸಿರುವ ಪರೀಕ್ಷೆ ಕೈಬಿಡಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು, ಹೆಚ್ಚುವರಿ ಶಿಕ್ಷಕರ ಸಮಸ್ಯೆ ನಿವಾರಿಸಬೇಕು, ಮುಖ್ಯೋಪಾಧ್ಯಾಯರಿಗೆ 15, 20, 25 ಹಾಗೂ 30 ವರ್ಷಗಳ ವೇತನ ಬಡ್ತಿಯ ಬಗ್ಗೆ ಚರ್ಚಿಸಲಾಯಿತು.
ಶಿಕ್ಷಣ ಸಂಯೋಜಕರ ಹುದ್ದೆ ಭರ್ತಿ, ಶಿಕ್ಷಕರಿಗೆ ಮೊಬೈಲ್ ಆ್ಯಪ್ ಮೂಲಕ ವೇತನ ಪತ್ರ ನೀಡುವುದು, ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರನ್ನಾಗಿ ಪರಿಗಣಿಸುವುದು, ಸೇವಾ ಪುಸ್ತಕವನ್ನು ಗಣಕೀಕರಣಗೊಳಿಸುವುದು, ಶಿಕ್ಷಕ ಮಿತ್ರ ಆ್ಯಪ್ ಅಳವಡಿಕೆ, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ಹಿಂದಿ ಶಿಕ್ಷಕರಿಗೂ ವರ್ಗಾವಣೆಯಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಸಂಘ ತಿಳಿಸಿದೆ.
ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಸಹ ಕಾರ್ಯದರ್ಶಿ ಕೆ.ಯುವರಾಜ್ ಇದ್ದರು.