ಕುಂದಾಪುರ: ಬೈಕ್ಗೆ ಕಾರು ಡಿಕ್ಕಿ- ಯುವಕ ಮೃತ್ಯು
ಕುಂದಾಪುರ: ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ರಾಯಲ್ ಎನ್ಫೀಲ್ಡ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ಭಂಡಾರ್ತಿ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಮೃತ ಸವಾರನನ್ನು ಮಹೇಂದ್ರ ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಚಿಪ್ಸಿ ಐಟಿ ಸರ್ವಿಸ್ ಪ್ರೈವೇಟ್ ಲಿ. ಕಂಪೆನಿಯ ಉದ್ಯೋಗಿಯಾಗಿದ್ದರು. ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಸೈಬ್ರಕಟ್ಟೆ ಕಡೆಯಿಂದ ಶಿರೂರು ಮೂರುಕೈ ಕಡೆಗೆ ಹೋಗುತ್ತಿದ್ದರು. ಬಿಲ್ಲಾಡಿ ಗ್ರಾಮದ ಭಂಡಾರ್ತಿ ಬಳಿ ತಲುಪಿದಾಗ ಗಣೇಶ್ ಎಂಬಾತ ತನ್ನ ಮಾರುತಿ ಸ್ವಿಫ್ಟ್ ಡಿಸೈರ್ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಯಲ್ ಎನ್ ಫೀಲ್ಡ್ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ.
ಇದರ ಪರಿಣಾಮ ಮಹೇಂದ್ರ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.