ಉಡುಪಿ ಜಿಲ್ಲಾ ಕೃಷಿಕ ಸಂಘ: ಫೆ.17 ರಂದು ರೈತ ಸಮಾವೇಶ
ಉಡುಪಿ, ಫೆ.14: ನಗರಗಳಲ್ಲದೆ ಹಳ್ಳಿಗಳಲ್ಲಿ ಕೂಡಾ ಕೃಷಿಯಿಂದ ವಿಮುಖವಾಗುತ್ತಿರುವ ಕೃಷಿಕರಿಗೆ ಹಾಗೂ ಕೃಷಿ ಆಸಕ್ತ ರಿಗೆ ಕಡಿಮೆ ಖರ್ಚಿನಲ್ಲಿ ಸುಲಭದ ಕೃಷಿ, ಹೈನುಗಾರಿಕೆ, ಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳನ್ನು, ಜಿಲ್ಲೆ ಯಲ್ಲಿ ಗ್ರಾಮ ಸಮಿತಿಗಳ ಮೂಲಕ ಕೃಷಿ ತಜ್ಞರು -ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಜಿಲ್ಲಾ ಕೃಷಿಕ ಸಂಘವು ಆಯೋಜಿಸಿರುವ ಜಿಲ್ಲಾ ರೈತ ಸಮಾವೇಶ ಇದೇ ಫೆ.17ರ ಶನಿವಾರ ಬೆಳಗ್ಗೆ 9:30ರಿಂದ ಸಂಜೆ 3 ಗಂಟೆಯವರೆಗೆ ಉಡುಪಿ ಕುಂಜಿಬೆಟ್ಟು ಶ್ರೀಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ.
ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯ ಮುಖ್ಯಸ್ಥೆ ಗಾಯತ್ರಿ ಆರ್. ರೈತ ಸಮಾವೇಶ-2024ನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದ ಮುಖ್ಯ ಅತಿಥಿಗಳಾಗಿ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಎಜಿಎಂ ಬಿ.ರಾಜ ಗೋಪಾಲ್ ಭಾಗವಹಿಸಲಿದ್ದಾರೆ ಎಂದರು.
ಕೃಷಿ ವಿಚಾರದ ತಾಂತ್ರಿಕ ಸಮಾವೇಶದಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಕೀಟ ರೋಗಗಳ ನಿಯಂತ್ರಣ ಬಗ್ಗೆ ಕಾಸರಗೋಡು ಸಿ.ಪಿ.ಸಿ.ಆರ್.ಐ ವಿಜ್ಞಾನಿ ಡಾ.ರವಿ ಭಟ್, ತೋಟಗಾರಿಕಾ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ಡಾ.ಎಚ್.ಎಸ್. ಚೈತನ್ಯ, ಉತ್ತಮ ಗೇರು ತಳಿಗಳು ಮತ್ತು ಬೆಳೆ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಡಾ.ಲಕ್ಷ್ಮಣ್ ಮಾತನಾಡಲಿದ್ದಾರೆ.
ಇನ್ನು ಮಲ್ಲಿಗೆ ಬೆಳೆಯ ನಿರ್ವಹಣಾ ತಾಂತ್ರಿಕತೆ ಬಗ್ಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ.ಧನಂಜಯ, ಹೈನುಗಾರಿಕೆಯಲ್ಲಿ ಮುಂಜಾಗೃತ ಕ್ರಮಗಳ ಬಗ್ಗೆ ಮಣಿಪಾಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ, ಕೃಷಿ ಪದವಿಯ ಅಗತ್ಯತೆ ಬಗ್ಗೆ ಬ್ರಹ್ಮಾವರ ಡಿಪ್ಲೋಮ ಕೃಷಿ ಮಹಾ ವಿದ್ಯಾಲಯದ ಡಾ.ಸುಧೀರ್ ಕಾಮತ್, ಕೃಷಿ ಇಲಾಖೆಯಿಂದ ಸಿಗುವ ಸರಕಾರಿ ಸೌಲಭ್ಯಗಳ ಬಗ್ಗೆ ಉಡುಪಿಯ ಜಂಟಿ ಕೃಷಿ ನಿರ್ದೇಶಕಿ ಎಂ. ಸೀತಾ; ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಉಡುಪಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಮತ್ತು ವಿದ್ಯುತ್ ಗ್ರಾಹಕರಿಗೆ ಅಗತ್ಯ ಮಾಹಿತಿಗಳನ್ನು ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ ನೀಡಲಿದ್ದಾರೆ.
ಕೃಷಿ ಮಾಹಿತಿ-ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣ ಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಸಮಾವೇಶದಲ್ಲಿ ಇರಲಿವೆ.
ಕೃಷಿ ಆಸಕ್ತರು, ಕೃಷಿಕ ಬಾಂಧವರು ಈ ರೈತ ಸಮಾವೇಶದಲ್ಲಿ ಭಾಗವಹಿಸಿ, ಕಡಿಮೆ ಖರ್ಚು, ಶ್ರಮ ಬಳಸಿ ಅಧಿಕ ಇಳು ವರಿ-ಲಾಭ ಪಡೆಯುವ ಕೃಷಿ-ತಂತ್ರಜ್ಞಾನಗಳ ಮಾಹಿತಿ ಪಡೆಯುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.