ಜೋಡೆತ್ತುಗಳು ಈಗ ಒಂಟೆತ್ತುಗಳಾಗಿವೆ: ನಳಿನ್ ಕುಮಾರ್
ಚಾಮರಾಜನಗರ: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲೂಟಿ ಹೊಡೆಯುವ ಸರ್ಕಾರ ಆಗಿತ್ತು ಎಂಬುದು ಜಗಜ್ಜಾಹೀರಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಲೂಟಿ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಅರ್ಕಾವತಿ ಪ್ರಕರಣ ಅವರ ಕಾಲದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ತಗೆದುಕೊಂಡಿದ್ದಾರೆ ಎಂಬುದನ್ನು ಅವರು ನೋಡಲಿ ಎಂದರು.
ರಾಜರಾಜೇಶ್ವರಿ ನಗರ ಕ್ಷೇತ್ರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗಕ್ಕೆ ಅದರದ್ದೇ ಆದ ನೀತಿ ನಿಯಮಗಳಿವೆ. ಎಲ್ಲವನ್ನೂ ರಾಜಕಾರಣ ದೃಷ್ಟಿಯಿಂದ ನೋಡಬಾರದು. ಸಿಬಿಐ ವಿಚಾರಣೆ ನಡೆದರೆ ರಾಜಕಾರಣ, ಐಟಿ ದಾಳಿಯಾದ್ರೂ ರಾಜಕಾರಣ ಎಂದು ಬಿಂಬಿಸುವುದು ಸರಿ ಅಲ್ಲ. ಕಾಂಗ್ರೆಸ್ ಆಡಳಿತದಲ್ಲಿರುವಾದ ಘಟಾನುಘಟಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹಾಗಿದ್ದರೆ ಅದೆಲ್ಲಾ ಇವರೇ ಮಾಡಿದ್ದಾ? ಈ ದೇಶದ ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು’ ಎಂದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿದವರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು. ಆ ಮಟಟಿ ಎಲ್ಲವನ್ನೂ ಕಾಮಾಲೆ ದೃಷ್ಟಿಯಿಂದ ನೋಡಿದರೆ ಇದೇ ರೀತಿ ಕಾಣುತ್ತದೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುವ ರಾಜಕಾರಣದ ದೃಷ್ಟಿಯಿಂದ ಹಾಗೆ ಮಾಡಿರುವುದರಿಂದ ಈಗ ಎಲ್ಲವೂ ಅವರಿಗೆ ಅದೇ ರೀತಿ ಕಾಣುತ್ತಿದೆ. ಬಿಜೆಪಿ ಸರ್ಕಾರ ಆ ರೀತಿ ಯಾವತ್ತೂ ನಡೆದುಕೊಳ್ಳುವುದಿಲ್ಲ. ಕಾನೂನು ಪಾಲನೆ ಮಾಡುತ್ತದೆ’ ಎಂದರು.
ಶಿರಾದಲ್ಲಿ ಕಾಂಗ್ರೆಸ್, ಬಿಜೆಪಿ ಒಪ್ಪಂದ ಮಾಡಿಕೊಂಡಿವೆ ಎಂದು ಜೆಡಿಎಸ್‌ನ ಎಚ್.ಡಿ.ರೇವಣ್ಣ ಅವರು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್ ಅವರು, ‘ದೇಶದ ರಾಜಕಾರಣ, ರಾಜ್ಯದ ರಾಜಕಾರಣದಲ್ಲಿ ಯಾರೂ ಯಾರ ಜೊತೆ ಇರುತ್ತಾರೆ, ಅಪ್ಪ ಯಾರ ಕಡೆ ಇರುತ್ತಾರೆ, ಮಗ ಯಾರ ಕಡೆ ಇರುತ್ತಾರೆ ಎಂಬುದು ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರ್‌ಸ್ವಾಮಿ ಅವರು ಪರಸ್ಪರ ಕಚ್ಚಾಟದಲ್ಲಿ ತೊಡಗಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಜೋಡೆತ್ತುಗಳು ಈಗ ಒಂಟೆತ್ತುಗಳಾಗಿವೆ. ಎರಡೂ ಬೇರೆ ಬೇರೆಯಾಗಿವೆ. ಅವುಗಳ ದಾಳಿ ನೋಡಿಕೊಂಡಿವೆ. ಒಂದು ಎತ್ತು ಓಡಿದರೆ, ಇನ್ನೊಂದು ಎತ್ತು ಓಡಿಸಿಕೊಂಡು ಬರುತ್ತಿದೆ. ಎರಡೂ ಎತ್ತುಗಳು ಪರಸ್ಪರ ಅಟ್ಟಾಡಿಸಿಕೊಂಡು ಓಡುತ್ತಿರಲಿ, ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ’ ಎಂದು ಉತ್ತರಿಸಿದರು.
ಸರಕಾರ ನಿಮ್ಮದು CBI, ACB,IT, ಇದೆಲ್ಲಾ ನಿಮ್ಮ ಪಕ್ಷದ ಸಂಸ್ಥೆಗಳು ಶಿಕ್ಷೆ ಕೊಡಿಸಿ ಚುನಾವಣೆ ಬಂದಾಗ ಇದೆಲ್ಲ ಸವ೯ಸಾಮಾನ್ಯ, ಎಲ್ಲದಕ್ಕಿಂತಲೂ ನಳಿನಣ್ಣ ದೊಡ್ಡ ಫೇಕು ಅಂತ ಪ್ರತಿಯೊಂದು ನಾಗರಿಕ ಬಂದು ಗಳಿಗೆ ತಿಳಿದಿರುವ ವಿಷಯ ಸಿದ್ದರಾಮಯ್ಯ ಲೂಟಿ ಸರ್ಕಾರ ಅಂತಿರಿ ಜೈಲಿಗೆ ಹೋದವರು ಯಾವ ಮುಖ್ಯ ಮಂತ್ರಿ ಯಾವ ಕಾರಣಕ್ಕೆ ರೈಲು ಬಿಡುವ ಮೊದಲು ಸ್ವಲ್ಪ ಆಲೋಚನೆ ಮಾಡುವ ಅಗತ್ಯವಿದೆ