ಉಡುಪಿ: ಮತ್ತೆ 10 ಕೊರೋನಾ ಪಾಸಿಟಿವ್ ಪ್ರಕರಣ, ಜಿಲ್ಲೆಯಲ್ಲಿ 64 ಮಂದಿ ಗುಣಮುಖ
ಉಡುಪಿ : ಮಹಾಮಾರಿ ಕೊರೋನಾ ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಮುಂದುವರಿದಿದ್ದು, ಮತ್ತೆ 10 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದ್ರಢಗೊಂಡಿದೆ.
ಸೋಂಕಿತರಲ್ಲಿ ಒಂಭತ್ತು ಮಂದಿ ಮಹಾರಾಷ್ಟ್ರದಿಂದ ಮತ್ತು ಒರ್ವ ಕತಾರ್ ನಿಂದ ಬಂದವರಾಗಿದ್ದಾರೆ. ಸೋಂಕಿತರಲ್ಲಿ ಏಳು ಪುರುಷ, ಇಬ್ಬರು ಮಹಿಳೆ, ಏಳು ವರ್ಷದ ಬಾಲಕಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೇರಿದೆ, ಆದರೆ ಸ್ವಲ್ಪ ನಿಟ್ಟುಸಿರು ಬಿಡುವ ವಿಷಯವೆಂದರೆ 64 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಬರೊಬ್ಬರಿ 299 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 299 ಹೊಸ ಪ್ರಕರಣ ದಾಖಲಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ.
ಅಂತೆಯೇ ಬೀದರ್ ಮತ್ತು ರಾಯಚೂರಿನಲ್ಲಿ ಇಬ್ಬರು ಸೋಂಕಿತರು ಬಲಿಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
1,218 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1,950 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
299 ಸೋಂಕಿತರ ಪೈಕಿ 253 ಮಹಾರಾಷ್ಟ್ರದಿಂದ ಬಂದವರು
ಇನ್ನು ಇಂದು ಪತ್ತೆಯಾಗಿರುವ 299 ಸೋಂಕಿತರ ಪೈಕಿ 253 ಮಂದಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.