ಮಲ್ಪೆ: ಎದೆ ನೋವಿನಿಂದ ಅಸ್ವಸ್ಥಗೊಂಡು ಮೀನುಗಾರ ಮೃತ್ಯು
ಮಲ್ಪೆ ಫೆ.12(ಉಡುಪಿ ಟೈಮ್ಸ್ ವರದಿ): ಅರಬ್ಬಿ ಸಮುದ್ರದಲ್ಲಿ 27 ನಾಟಿಕಲ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟಿನ ಕಲಾಸಿಯೊಬ್ಬರು ಎದೆನೋವಿನಿಂದ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಬೋಟಿನ ಕಲಾಸಿ ಮ್ಯಾಥೀವ್(52) ಮೃತಪಟ್ಟವರು. ಇವರು ಯಮುನ ಅವರ ಮಾಲಕತ್ವದ ಶ್ರೀ ಮಹಾಲಕ್ಷ್ಮೀ ಬೋಟ್ನಲ್ಲಿ ಕಲಾಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು ನಿನ್ನೆ ಮಧ್ಯಾಹ್ನದ ವೇಳೆ ಮೀನುಗಾರಿಕೆಗೆಂದು ಇತರರೊಂದಿಗೆ ಅರಬ್ಬಿ ಸಮುದ್ರಕ್ಕೆ ತೆರಳಿದ್ದರು. ಈ ನಡುವೆ ಇಂದು ಬೆಳಗ್ಗಿನ ಜಾವ 2:30ರ ಸುಮಾರಿಗೆ 27 ನಾಟಿಕಲ್ಲ್ ದೂರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆ ಕೆಲಸ ಮಾಡುತ್ತಿದ್ದ ಮ್ಯಾಥೀವ್ ಅವರು ಎದೆ ನೋವು ಎಂದು ಅಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಇವರನ್ನು ಮಲ್ಪೆ ಬಂದರಿಗೆ ಕರೆತಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷಿಸಿದ ವೈದ್ಯರು ಮ್ಯಾಥೀವ್ ರವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.