ತೊಟ್ಟಂ ಸಂತ ಅನ್ನಮ್ಮನವರ ದೇವಾಲಯದಲ್ಲಿ ಸಮುದಾಯದ ದಿನಾಚರಣೆ
ಉಡುಪಿ: ಪ್ರತಿಯೊಬ್ಬರು ಸಹೋದರರಾಗಿ ಪರಸ್ಪರ ಅನೋನ್ಯತೆಯಿಂದ ಸಹಕಾರದ ಮನೋಭಾವದಿಂದ ಜೀವಿಸಿದಾಗ ಸಮಾಜದಲ್ಲಿ ಏಕತೆ ಮತ್ತು ಒಗ್ಗಟ್ಟಿನ ಬಲಿಷ್ಠ ಸಮುದಾಯ ಕಟ್ಟಲು ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಅವರು ಭಾನುವಾರ ತೊಟ್ಟಂ ಸಂತ ಅನ್ನಮ್ಮನವರ ದೇವಾಲಯದಲ್ಲಿ ಆಯೋಜಿಸಿದ್ದ ಸಮುದಾಯದ ದಿನಾಚರಣೆ ಕಾರ್ಯಕ್ರಮದ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಾಲಯ ಕ್ರೈಸ್ತರ ಮೊದಲ ಕುಟುಂಬ ಎನ್ನುವುದನ್ನು ಗಮನದಲ್ಲಿರಿಸಿ ಚರ್ಚಿನ ಎಲ್ಲಾ ಸದಸ್ಯರು ಜೊತೆಯಾಗಿ ಸೇರಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದಾಗ ನಮ್ಮಲ್ಲಿನ ಸಹೋದರತ್ವ ಇನ್ನಷ್ಟು ಬಲಿಷ್ಠವಾಗಲು ಸಾಧ್ಯವಿದೆ. ಆಧುನಿಕ ಜಗತ್ತಿನಲ್ಲಿ ನಮ್ಮನ್ನು ಬೇರ್ಪಡಿಸಲು ಹಲವಾರು ದಾರಿಗಳಿದ್ದರೂ ಕೂಡ ಒಂದಾಗಿ ಬಾಳಲು ಸಮುದಾಯದ ದಿನಾಚರಣೆ ದಾರಿಯಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂತ ಅನ್ನಮ್ಮನವರ ದೇವಾಲಯದ ಪ್ರಧಾನ ಧರ್ಮಗುರು ವಂ| ಡೆನಿಸ್ ಡೆಸಾ ಚರ್ಚಿನಲ್ಲಿ ಒಟ್ಟು 12 ವಾಳೆಗಳಿದ್ದು ಅದರಲ್ಲಿನ ಪ್ರತಿ ಕುಟುಂಬದ ಸದಸ್ಯರು ಒಂದೇ ಮನಸ್ಸಿನಿಂದ ಸಮುದಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮಲ್ಲಿರುವ ಒಗ್ಗಟ್ಟನ್ನು ಸೂಚಿಸುತ್ತದೆ. ನಮ್ಮ ಪ್ರತಿಯೊಬ್ಬರ ಕೇಂದ್ರ ಬಿಂದು ಯೇಸು ಕ್ರಿಸ್ತರಾಗಿದ್ದು ನಮ್ಮ ನಮ್ಮ ವಾಳೆಗಳಲ್ಲಿ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಸ್ವಸ್ಥ ಸಮುದಾಯ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.
ಉಡುಪಿ ಧರ್ಮಪ್ರಾಂತ್ಯ ಶ್ರೇಷ್ಠ ಗುರುವಾಗಿ ನೇಮಕಗೊಂಡ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರನ್ನು ಧರ್ಮಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಚರ್ಚಿನಲ್ಲಿ ಆಯೋಜಿಸಿದ್ದ ಬೈಬಲ್ ಕ್ವಿಜ್ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚರ್ಚಿನ ತರಬೇತಿ ಗುರು ವಂ|ಸ್ಟೀಫನ್ ರೊಡ್ರಿಗಸ್, ಸಂತ ಅನ್ನಮ್ಮ ಕಾನ್ವೆಂಟ್ ಇದರ ಮುಖ್ಯಸ್ಥರಾದ ಸಿಸ್ಟರ್ ಪ್ರೆಸಿಲ್ಲಾ, ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕರಾದ ವನಿತಾ ಫೆರ್ನಾಂಡಿಸ್, ಕಿರು ಕ್ರೈಸ್ತ ಸಮುದಾಯದ ಸಂಯೋಜಕಿ ಶಾಂತಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಚರ್ಚಿನ 12 ವಾಳೆಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.