ವೃತ್ತಿಗೆ ಗೌರವ ನೀಡಿ ಸಮಾಜವನ್ನು ಮುಂದುವರಿಸುವ ಜವಾಬ್ದಾರಿ ನ್ಯಾಯವಾದಿಗಳ ಮೇಲಿದೆ- ಸ್ಪೀಕರ್ ಯು. ಟಿ.ಖಾದರ್
ಉಡುಪಿ: ನ್ಯಾಯವಾದಿಗಳು ಬಹಳಷ್ಟು ಒತ್ತಡ ದಲ್ಲಿರುತ್ತಾರೆ. ಕ್ರೀಡೆ, ಸಾಂಸ್ಕೃತಿಕ ಸಹಿತ ವಿವಿಧ
ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ನಿವಾರಣೆ ಸಾಧ್ಯ. ಒತ್ತಡ ಮುಕ್ತವಾಗಿ ಕಾರ್ಯನಿರ್ವಹಿ ಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹೇಳಿದರು.
ಉಡುಪಿ ವಕೀಲರ ಸಂಘದ ವತಿಯಿಂದ ಕೋರ್ಟ್ ಆವರಣದಲ್ಲಿ ಶನಿವಾರ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ “ಕಲಾ ಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಕಾನೂನು ವೃತ್ತಿಗೆ ಗೌರವ ನೀಡಿ ಸಮಾಜವನ್ನು ಮುಂದುವರಿಸುವ ಜವಾಬ್ದಾರಿ ನ್ಯಾಯವಾದಿಗಳ ಮೇಲಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಅಧಿಕಾರವೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗಿದೆ. ವಿವಿಧ ಚಟುವಟಿಕೆಗಳ ಮೂಲಕ ರಾಜ್ಯದವಕೀಲರ ಸಂಘಕ್ಕೆ ಉಡುಪಿ ವಕೀಲರ ಸಂಘ ಮಾದರಿಯಾಗಿದೆ ಎಂದರು.
ಕಲಾಪದಲ್ಲಿ ನಾನು ಕೂಡ ನ್ಯಾಯಾಧೀಶನ ಪಾತ್ರ ನಿಭಾಯಿಸುತ್ತೇನೆ. ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಕೊಂಡಿದ್ದ ನಾನು ಅದು ಅಸಾಧ್ಯವೆಂದು ಭಾವಿಸಿ ಕಲಾವಿಭಾಗ ಪಡೆದು ಕಾನೂನುಅಧ್ಯಯನ ಮಾಡಿದೆ. ಬಳಿಕ ಶಾಸಕನಾಗಿ, ಸಚಿವನಾಗಿ, ಸಭಾಧ್ಯಕ್ಷನಾಗಿದ್ದೇನೆ. ಅದೃಷ್ಟ ಚೆನ್ನಾಗಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದರು. ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ. ಜೋಷಿ ಮಾತನಾಡಿ, ನ್ಯಾಯ ವಾದಿಗಳು ತಮ್ಮ ವೃತ್ತಿ ಜೀವನದಲ್ಲಿ ಸ್ವಂತಿಕೆ ಮತ್ತು ವೈಯಕ್ತಿಕ ಛಾಪಿಗೆ ಆದ್ಯತೆ ನೀಡಬೇಕು. ಹೊಸತನ, ನೈಪುಣ್ಯ ತರಬೇಕು ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ಪತ್ನಿ ಜಯಶ್ರೀ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ ಪ್ರಸ್ತಾವನೆಗೈದರು. ಪ್ರ. ಕಾರ್ಯದರ್ಶಿ ರಾಜೇಶ ಎ.ಆರ್. ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಹಾಗೂ ಸಹನಾ ಕುಂದರ್ ನಿರೂಪಿಸಿದರು.