ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ: ಜಿಲ್ಲಾಧಿಕಾರಿ
ಉಡುಪಿ: ಭಾರತದ ಪ್ರತಿಯೊಬ್ಬ ಪ್ರಜೆಯೂ ಘನತೆ ಗೌರವದಿಂದ ಬದುಕಲು ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ ಇದರ ಆಶಯಗಳನ್ನು ಎತ್ತಿ ಹಿಡಿಯುವುದು ದೇಶದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ .ಕೆ ಅವರು ತಿಳಿಸಿದರು.
ಅವರು ಶನಿವಾರ ಸಂಜೆ ಮಲ್ಪೆಯ ಕಡಲ ತೀರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ತಿರಂಗ ಬಲೂನ್ಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಸಂವಿಧಾನ ಮೌಲ್ಯ ಮತ್ತು ಆದರ್ಶಗಳ ಬಗ್ಗೆ ಅರಿವನ್ನು ಹೊಂದಿದಾಗ ಮಾತ್ರ ಈ ಕಾರ್ಯವನ್ನು ಮಾಡಲು ಸಾಧ್ಯ ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಭ್ರಾತೃತ್ವ ಸೇರಿದಂತೆ ಮತ್ತಿತರ ಹಕ್ಕು ಒದಗಿಸಿದೆ. ದೇಶದ ಪ್ರತಿಯೊಂದು ಕಾನೂನು ಸಂವಿಧಾನದ ಅಡಿಯಲ್ಲಿ ಬರುತ್ತವೆ ಎಂದರು. ಸಂವಿಧಾನದ ತತ್ವಾದರ್ಶಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನ ಕುರಿತ ಅರಿವು ಹೊಂದಬೇಕು. ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಾಥದಲ್ಲಿ ಸಂವಿಧಾನದ ಮೂಲ ಅಂಶಗಳಾದ ಧರ್ಮ ನಿರಪೇ ಕ್ಷತೆ ,ಜಾತ್ಯತೀತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸುವ ವಿಧಿಗಳು, ಮೂಲಭೂತ ಹಕ್ಕುಗಳು ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸಂವಿಧಾನ ಜಾಗೃತಿ ಜಾಥಾ ವು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಸಂಚರಿಸಲಿದೆ ಈ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಬಳಿಕ ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಭೋದಿಸಿದರು.
ಜಯನ್ ಮಲ್ಪೆ ಮಾತನಾಡಿ ಸಂವಿಧಾನ ನಮ್ಮ ಜನರ ಉಸಿರಾಗಿದೆ ಇದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಜಿಲ್ಲಾಡಳಿತ ಸಂವಿಧಾನದ ಜಾಗೃತಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಕ್ಯವಾಗಿ ಆಯೋಜಿಸಿದರೊಂದಿಗೆ ಗ್ರಾಮೀಣ ಭಾಗದ ಜನರ ನಾಡಿ ಮಿಡಿತದಲ್ಲಿ ಸಂವಿಧಾನ ಜಾಗೃತಿ ಜಾಥ ಸಾಗಿ ಬಂದಿದೆ ಎಂದರು.
ಮರಳಿನ ಮೇಲೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಮತ್ತು ಸಂವಿಧಾನ ಪೀಠಿಕೆಯ ಚಿತ್ರವನ್ನು ಬರೆದು ಕ್ರಿಯಾಶೀಲ ಹಾಗೂ ವಿಶಿಷ್ಠ ರೀತಿಯಲ್ಲಿ ರಚಿಸಿ ಸಂವಿಧಾನದ ಬಗ್ಗೆ ಜಾಗ್ರತೆ ಮೂಡಿಸಿದ್ದು ಅತ್ಯಾಕರ್ಷವಾಗಿತ್ತು. ಯಕ್ಷಗಾನ ವೇಷಭೂಷಣದ ಸೆಲ್ಫಿ ಪಾಯಿಂಟ್ನಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳುತ್ತಿ ರುವುದು ವಿಶೇಷವಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಗಳೂರಿನ ಖ್ಯಾತ ಬಾಲ ಪ್ರತಿಭೆ ಆಶ್ಮಿತ್ ಎ. ಜೇ ಅವರ ಬಳಗ
ಸುಮುಧುರ ಕಂಠ ದಲ್ಲಿ ಸಂವಿಧಾನ ಪೀಠಿಕೆ ಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಬನ್ನಂಜೆ ಯ ವಿದ್ಯಾರ್ಥಿನಿಯರು ಮೇಲ್ವಿಚಾರಕಿ ಸುಚಿತ್ರ ಇವರ ನೇತೃತ್ವದಲ್ಲಿ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳ ಕುರಿತ ಸುಂದರ ನೃತ್ಯವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠ ಧಿಕಾರಿ, ಅರುಣ್ ಕುಮಾರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅನಿತಾ ಮಡ್ಲೂರು, ಸಹಾಯಕ ನಿರ್ದೇಶಕ ರೋಶನ್ ಕುಮಾರ್,ರಮೇಶ್ ನಾಯಕ್, ದಲಿತ ಮುಖಂಡರಾದ ರಮೇಶ್ ಕೋಟ್ಯಾನ್, ಮಂಗಳೂರು ಆರನೇ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಹಾಗೂ ಮತದಾರರು ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.